ಶಿರಸಿ: ಮೆಡಿಕಲ್ ಕಾಲೇಜು, ಹೈಟೆಕ್ ಆಸ್ಪತ್ರೆ, ಜಿಲ್ಲೆಯ ಜನರ ನಿರುದ್ಯೋಗ ನಿವಾರಣೆ ಕೆಲಸ ಬಹುಕಾಲ ರಾಜ್ಯ ಭಾರ ಮಾಡಿದ ರಾಜಕಾರಣಿಗಳ ಕರ್ತವ್ಯ. ಅದರಲ್ಲೂ ಹೆಚ್ಚು ಬಾರಿ ಜಿಲ್ಲೆಯಲ್ಲಿ ಅಧಿಕಾರ ಮಾಡಿದ ದೇಶಪಾಂಡೆ ಸಾಹೇಬರು ಮಾಡಬೇಕಿತ್ತು ಎಂದು ಹೇಳಿದರೆ, ಜಿಲ್ಲಾ ಕಾಂಗ್ರೆಸ್ ನಾಯಕರೆಲ್ಲ ನನ್ನ ಮೇಲೆ ವಾಗ್ದಾಳಿ ಮಾಡುತ್ತಾರೆ ಎಂದರೆ ಅದರರ್ಥ ಏನು? ಸತ್ಯ ಹೇಳಿದರೆ ಸಹಿಸಲು ಆಗುವುದಿಲ್ಲ ಎಂದೇ ಅಲ್ಲವೇ? ನಮ್ಮ ಪಕ್ಕದ ಜಿಲ್ಲೆಯಾದ ದಕ್ಷಿಣ ಕನ್ನಡವನ್ನು ನೋಡಿ ಕಲಿಯಬೇಕು, ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಒಂದಾಗುತ್ತಾರೆ, ಹೈಟೆಕ್ ಆಸ್ಪತ್ರೆ ಆದರೆ ನಿಮ್ಮ ಕುಟುಂಬಕ್ಕೂ ಅನುಕೂಲ ಆಗತ್ತೆ ಅಲ್ಲವೇ ಎಂದು ಅನಂತಮೂರ್ತಿ ಹೆಗಡೆ ಪ್ರಶ್ನಿಸಿದ್ದಾರೆ.
ನಾನು ವೈಯಕ್ತಿಕವಾಗಿ ಏನೂ, ಯಾರ ಬಗ್ಗೆ, ಯಾವ ಪಕ್ಷದ ಬಗ್ಗೆ ಹೇಳಿಲ್ಲ, ಸಾಹೇಬರು ಐದು ಬಾರಿ ಮಂತ್ರಿ , ಬೃಹತ ಕೈಗಾರಿಕೆ ಮಂತ್ರಿ, ಸುಮಾರು 25 ವರ್ಷ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಇವತ್ತಿಗೂ ನಮ್ಮಂತಹ ಯುವಕರು ಆಸ್ಪತ್ರೆ ಕೊಡಿಸಿ, ಜೀವ ಉಳಿಸಿ ಎಂದು ಬೀದಿಯಲ್ಲಿ ನಿಂತು ಹೋರಾಟ ಮಾಡಬೇಕೆಂದರೆ ಅದಕ್ಕೆ ಯಾರು ಹೊಣೆ? ಎಂದು ಅನಂತಮೂರ್ತಿ ಹೆಗಡೆ ಪ್ರಶ್ನಿಸಿದ್ದಾರೆ.
ಉದ್ಯೋಗವಿಲ್ಲದೆ ನಮ್ಮ -ನಿಮ್ಮ ಮನೆ ಮಕ್ಕಳು ದೂರದ ಗೋವಾಕ್ಕೆ , ಬೆಂಗಳೂರಿಗೆ, ಮುಂಬೈಗೆ ಕೆಲಸಕ್ಕೆ ಹೋಗುವ ಪರಿಸ್ಥಿತಿ ಇದೆ. ಪಾಪ ತಿಂಗಳಿಗೆ ಕೇವಲ 10 -12 ಸಾವಿರಕ್ಕೆ ಬೇಕರಿ, ಹೋಟೆಲ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ನೆನೆಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ. ನಮ್ಮ ಜಿಲ್ಲೆಯಲ್ಲಿ ಒಂದೇ ಒಂದು ಫ್ಯಾಕ್ಟರಿ ಇಲ್ಲ. ನಿಜವಾಗಿಯೂ ನಾಚಿಕೆ ಆಗಬೇಕು. ಕೊನೆ ಕಾಲದಲ್ಲಿ ಮಕ್ಕಳು ತಂದೆ ತಾಯಿಯನ್ನ ಬಿಟ್ಟು ಯಾವುದೋ ಊರಿನಲ್ಲಿ ಪರದೇಸಿಗಳಾಗಿ ಬದುಕುವ ಪರಿಸ್ಥಿತಿ ಎದುರಾಗಿದೆ. ಇಲ್ಲಿ ಅಪ್ಪ ಅಮ್ಮನಿಗೆ ಹುಷಾರಿಲ್ಲ ಎಂದರೂ ಚಿಕಿತ್ಸೆ ಕೊಡಿಸಲು ಅಸ್ಪತ್ರೆ ಇಲ್ಲ, ಆರೈಕೆ ಮಾಡಲು ಮಕ್ಕಳಿಲ್ಲ. ಅಪ್ಪ ಅಮ್ಮ ಹಾಕುವ ಕಣ್ಣೀರು ಹೃದಯ ತಟ್ಟುವದಿಲ್ಲವೇ ಎಂದೂ ಕೇಳಿದ್ದಾರೆ.
ಕುಮಟಾ ಭಾಗದ ಹಿರೇಗುತ್ತಿಯಲ್ಲಿ 1,800 ಏಕರೆ KIADB ಜಾಗ ಇದೆ, ಮೂರೂರು ಗುಡ್ಡ ಸುಮಾರು 3 -5 ಸಾವಿರ ಎಕರೆ ಇದೆ. ಒಂದೇ ಒಂದು ಮರವನ್ನ ಕಡಿಯದೆ ನಮ್ಮ ಜಿಲ್ಲೆಯಲ್ಲಿ ಹಲವಾರು ಕೈಗಾರಿಕೆ ಮಾಡುವ ಜಾಗ ಪ್ರತಿ ತಾಲೂಕಿನಲ್ಲಿದೆ. ಏಷ್ಟೋ ಲಕ್ಷ ನಮ್ಮ ಜಿಲ್ಲೆ ಜನರಿಗೆ ಉದ್ಯೋಗ ನೀಡಬಹುದಿತ್ತು. ಆದರೆ ಕೈಗಾರಿಕೆ ಮಾಡುವ ಇಚ್ಛಾಶಕ್ತಿ ಇಲ್ಲ ಅಷ್ಟೇ, ಎಂದ ಅವರು ಪಕ್ಷದ ವಿಚಾರ ಬಿಡಿ, ಆಸ್ಪತ್ರೆ ವಿಚಾರ ಬಂದಾಗ ಎಲ್ಲ ವಿಷಯ ಬದಿಗಿಟ್ಟು ಹೋರಾಟ ಮಾಡೋಣ, ಒಂದು ವೇಳೆ ಆಸ್ಪತ್ರೆ ಆದರೆ ನಮಗೆ ಒಳ್ಳೇದು ಅಲ್ಲವೇ?
ದೇಶಪಾಂಡೆ ಸಾಹೇಬರ ಹತ್ತಿರ ಟೊಯೊಟಾ, ಹೊಂಡ ಅಂತಹ ಕಂಪನಿಯಲ್ಲಿ ಪಾಲುದಾರಿಕೆ, ನೂರಾರು ಎಕರೆ ಜಾಗ, ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಮನಸ್ಸು ಮಾಡಿದರೆ 100 ಅಸ್ಪತ್ರೆ ಕಟ್ಟಿಸುವ ಶಕ್ತಿ ಅವರಿಗಿದೆ ಎಂಬುದು ಕೂಡ ನಮ್ಮ ಜಿಲ್ಲೆ ಜನರಿಗೆ ಗೊತ್ತಿದೆ.
ಸಾಹೇಬರಿಗೆ ನಮ್ಮ ಜಿಲ್ಲೆ ಅಸ್ತಿತ್ವ, ಅಧಿಕಾರ, ಗೌರವ ಎಲ್ಲವನ್ನೂ ಕೂಡ ಕೊಟ್ಟಿದೆ. ಸಾಹೇಬರು ಜಿಲ್ಲೆಯ ಜನರಿಗೆ ಸಹಾಯ ಮಾಡಲಿ ಎಂಬುದಾಗಿ ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದ ಅವರು, ಶಿರಸಿ ಅಥವಾ ಕುಮಟಾ ಭಾಗದಲ್ಲಿ ಕೆ.ಎಸ್. ಹೆಗ್ಡೆ ತರಹದ ಒಂದು ಒಳ್ಳೆಯ ಅಸ್ಪತ್ರೆ , ಮೆಡಿಕಲ್ ಕಾಲೇಜು ಅವರ ತಂದೆಯವರಾದ ವಿ.ಆರ್.ದೇಶಪಾಂಡೆ ಅವರ ಹೆಸರಿನಲ್ಲಿ ನಿರ್ಮಿಸಲಿ, ಅವರೇ ಸ್ವಂತ ಖರ್ಚಿನಿಂದ ನಿರ್ಮಿಸಲಿ, ನಾವೆಲ್ಲರೂ ಅವರನ್ನ ನಮ್ಮ ಜೀವನ ಪರ್ಯಂತ ನಮಿಸೋಣ. ತಾನು ವೈಯಕ್ತಿಕವಾಗಿ ದೇಶಪಾಂಡೆ ಸಾಹೇಬರ ಅಭಿಮಾನಿ, ಅವರ ಬಗ್ಗೆ ಅಪಾರ ಗೌರವವಿದೆ ಎಂದು ಅವರು ಹೇಳಿದ್ದಾರೆ.