ಶಿರಸಿ: ನರೇಗಾ ಯೋಜನೆ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದೆ. ಈ ಯೋಜನೆಯಡಿ ಅನೇಕ ಸೌಲಭ್ಯಗಳು ದೊರಕುತ್ತಿದ್ದು, ಜನರು ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಾನಗೋಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಾರಾಂ ಭಟ್ ಹೇಳಿದರು.
ತಾಲೂಕಿನ ಕಾನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೂರು ಗ್ರಾಮದಲ್ಲಿ ಗುರುವಾರ ‘ನರೇಗಾ ನಡಿಗೆ ಸುಸ್ಥಿರತೆಯೆಡೆಗೆ’ ಅಭಿಯಾನದಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ 2024-25ನೇ ಸಾಲಿನ ಕಾರ್ಮಿಕ ಅಯವ್ಯಯ ತಯಾರಿಸುವ ಉದ್ದೇಶದಿಂದ ನರೇಗಾ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನದಡಿ ಮನೆ ಮನೆ ಭೇಟಿ ನೀಡಿ ಜನರಿಗೆ ಯೋಜನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ತಾಲೂಕು ಬರಪೀಡಿತವಾಗಿ ಘೋಷಣೆ ಆಗಿರುವುದರಿಂದ ಜನರು ನರೇಗಾ ಯೋಜನೆಯಡಿ ಕಾಮಗಾರಿ, ಕೂಲಿಯೊಂದಿಗೆ ಅನೇಕ ಸೌಲಭ್ಯಗಳನ್ನು ಪಡೆದು, ಆರ್ಥಿಕವಾಗಿ ಸಬಲರಾಗಿ ಎಂಬ ಸಲಹೆ ನೀಡಿದರು.
ತಾಲೂಕ ಐಇಸಿ ಸಂಯೋಜಕ ವಿಶ್ವಾಸ ಅಂಗಡಿ ಮಾತನಾಡಿ, ನರೇಗಾ ಯೋಜನೆಯಡಿ ಜನ ಕೈಗೊಳ್ಳಬಹುದಾದ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಮಾಹಿತಿ ನೀಡಿದರು. ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಮಿತಿಯನ್ನು 2.5 ಲಕ್ಷದಿಂದ 5ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ದುಡಿಯುವ ಕೈಗಳಿಗೆ ಕೆಲಸದೊಂದಿಗೆ ಸಮಾನ ಕೂಲಿ ಒದಗಿಸುವ ಉದ್ಯೋಗ ಖಾತರಿ ಯೋಜನೆಯ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.
ಮನೆ ಭೇಟಿ ವೇಳೆ ಗ್ರಾಮ ಪಂಚಾಯಿತಿಯಿ0ದ ಕಾಮಗಾರಿಗಳ ಬೇಡಿಕೆ ಪೆಟ್ಟಿಗೆಯಲ್ಲಿ ಜನರಿಂದ ಕಾಮಗಾರಿಗಳ ಬೇಡಿಕೆ ಪಡೆದುಕೊಳ್ಳಲಾಯಿತು. ಈ ವೇಳೆ ಪಂಚಾಯಿತಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಶೆಟ್ಟಿ, ಬಿಲ್ ಕಲೆಕ್ಟರ್ ಚಂದ್ರು ಉಪ್ಪಾರ, ಎಂಬಿಕೆ ಗೀತಾ ಬಂಡಾರಿ ಹಾಗೂ ಪಂಚಾಯಿತಿ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.