ಸಿದ್ದಾಪುರ: ಶ್ರೇಷ್ಠ, ಸುಂದರ ಭಾಷೆಯೆನಿಸಿದ ಕನ್ನಡ ಭಾಷೆ ಅಮೃತಕ್ಕೆ ಸಮಾನವಾದುದ್ದು. ನಾಡಿನ ಸಾಧಕರೆಲ್ಲರೂ ಕನ್ನಡ ಮಾಧ್ಯಮದಲ್ಲೇ ಕಲಿತಿದ್ದಾರೆ. ಇದು ನಮ್ಮ ಕನ್ನಡ ಭಾಷೆಗಿರುವ ಶಕ್ತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ ನುಡಿದರು.
ಪಟ್ಟಣದ ಬಾಲಿಕೊಪ್ಪ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಮಕ್ಕಳ ಸಾಹಿತ್ಯ ಅವಲೋಕನ ಹಾಗೂ ವಿದ್ಯಾರ್ಥಿ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಕಥೆ, ಕವನ ಸ್ಫರ್ಧೆಯ ಬಹುಮಾನ ವಿತರಿಸಿದ ಎಸ್‌ಡಿಎಮ್‌ಸಿ ಅಧ್ಯಕ್ಷ, ಸಮಾಜಮುಖಿ ಸಂಪಾದಕ ಕನ್ನೇಶ ಕೋಲಸಿರ್ಸಿ ಮಾತನಾಡಿ, ಹೆತ್ತವರು ಮಕ್ಕಳಿಗೆ ಪೂರ್ಣಚಂದ್ರ ತೇಜಸ್ವಿಯವರ ರೀತಿಯಲ್ಲಿ ಯಾರೂ ನೋಡದ ಪ್ರಕೃತಿ ಪ್ರೇಮ ಬೆಳಿಸಿದ್ದಲ್ಲಿ ಹೊಸ ಕಲ್ಪನೆ ಚಿಗುರಿಸಬಹುದು. ಪಾಲಕರು, ಶಿಕ್ಷಕರು ಈ ನಿಟ್ಟಿನಲ್ಲಿ ಮಕ್ಕಳಿಗೆ ಮುಕ್ತ ಅವಕಾಶ ನೀಡಬೇಕೆಂದರು.
ಬಿಆರ್‌ಸಿ ಸಮನ್ವಯಾಧಿಕಾರಿ ಚೈತನ್ಯಕುಮಾರ ಕೆ.ಎಮ್., ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳನ್ನು ಪದರೂಪದಲ್ಲಿ ಹೆಣೆದಾಗ ಅದೇ ಕಥೆ,ಕವನವಾಗಿ ರೂಪುಗೊಳ್ಳುತ್ತದೆ. ಇದನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕೆಂದರು. ಕವಯಿತ್ರಿ, ಶಿಕ್ಷಕಿ ಸುಧಾರಾಣಿ ನಾಯ್ಕ ಮಕ್ಕಳ ಸಾಹಿತ್ಯ ಅವಲೋಕನ ಮಾಡುತ್ತ, ಇದು ಬಾಲ್ಯದಲ್ಲಿ ಅಮ್ಮನ ಮಡಿಲಿನ ಜೋಗುಳದಿಂದಲೇ ಪ್ರಾರಂಭವಾಗುತ್ತದೆ. ಮಕ್ಕಳಲ್ಲಿ ಇದು ಅನುರಕ್ತವಾಗಿದ್ದು, ಅವರ ಅನುಭವವನ್ನು ಕಥೆ,ಕವನ ರೂಪದಲ್ಲಿ ಬರೆಯಲು ಶಿಕ್ಷಕರಾದ ನಾವು ಮುಕ್ತ ಅವಕಾಶ ನೀಡೋಣ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳ ಕವಿಗೋಷ್ಠಿಯಲ್ಲಿ ಸುಘೋಷ್ ಹೆಗಡೆ, ತನ್ಮಯಿ ನಾಯ್ಕ, ವೈಷ್ಣವಿ ಸಿ.ಎನ್., ಪೂರ್ವಿ ಪಿ., ಜನಾರ್ಧನ ನಾಯ್ಕ, ಲಾವಣ್ಯ, ಖುಷಿ, ಶ್ರೀಧರ ಹೆಗಡೆ ಕವನ ವಾಚಿಸಿದರು. ಮಕ್ಕಳ ಸಾಹಿತಿಗಳ ಕುರಿತು ಆಧ್ಯಾ ಕುಮಟಾಕರ, ನಿಹಾರಿಕಾ ಡೋಂಗ್ರೆ, ಸುಘೋಷ, ತನ್ಮಯಿ, ಅಧಿತಿ ಹೊಸ್ಮನೆ ಅನಿಸಿಕೆ ವ್ಯಕ್ತಪಡಿಸಿದರು.
ಕಸಾಪ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಟಿ.ಕೆ.ಎಮ್.ಅಜಾದ್, ಶಿಕ್ಷಕರಾದ ಎಸ್.ಜಿ.ನಾಯ್ಕ, ಅರ್ಜುನ ಛೌಹಾಣ, ಚಿಕ್ಕ ನಾಯ್ಕ, ಸವಿತಾ ಗೌಡ, ವಿದ್ಯಾ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ಸುಜಾತಾ ಶಾನಬಾಗ್ ಪ್ರಾಸ್ತಾವಿಕ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ಶ್ಲಾಘಿಸಿದರು. ಶಿಕ್ಷಕಿ ಪದ್ಮಾವತಿ ನಾಯ್ಕ ನಿರೂಪಿಸಿದರು. ಸಂತೋಷ ಅಳ್ವೆಕೋಡಿ ಸ್ವಾಗತಿಸಿದರು. ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ವಂದನಾರ್ಪಣೆ ಮಾಡಿದರು.