ಅಂಕೋಲಾ: ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಲಾಯನ್ಸ್ ಕ್ಲಬ್ ಕರಾವಳಿ ವತಿಯಿಂದ ಉರ್ದು ಶಾಲಾ ಮಕ್ಕಳಿಗೆ ಕನ್ನಡ ಭಾವಗೀತೆ ಹಾಡುವ ವಿನೂತನ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮ ಉರ್ದು ಮಾಧ್ಯಮ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ ಹುಟ್ಟಿಸಲು ಕಾರಣವಾಯಿತು.
ಹಿರಿಯ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಉರ್ದು ಶಾಲಾ ಮಕ್ಕಳು ಭಾಗವಹಿಸಿದ್ದರು. ಕನ್ನಡದ ಪ್ರಸಿದ್ಧ ಕವಿಗಳಾದ ಕುವೆಂಪು, ಗೋವಿಂದ ಪೈ, ದಿನಕರ ದೇಸಾಯಿ, ದ.ರಾ.ಬೇಂದ್ರೆ, ಡಿ.ಎಸ್.ಕರ್ಕಿ, ನಿಸ್ಸಾರ್ ಅಹಮ್ಮದ್, ನಾರಾಯಣ ಹುಯಿಲಗೋಳ, ರಾಜರತ್ನಂ, ಪಂಜೇ ಮಂಗೇಶರಾಯರ ಮುಂತಾದ ಕವಿಗಳ ಭಾವಗೀತೆಗಳನ್ನು ಶುಶ್ರಾವ್ಯವಾಗಿ ಹಾಡಿ ವಿದ್ಯಾರ್ಥಿಗಳು ಪ್ರೇಕ್ಷಕರನ್ನು ರಂಜಿಸಿದರು.
ಈ ಭಾವಗೀತೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಆರ್‌ಸಿ ಸಂಯೋಜಕಿ ಹರ್ಷಿತಾ ನಾಯಕ ಮಾತನಾಡಿ, ಈ ಕಾರ್ಯಕ್ರಮದಿಂದ ಉರ್ದು ಶಾಲಾ ಮಕ್ಕಳಲ್ಲಿ ಕನ್ನಡದ ಬಗ್ಗೆ ತಿಳುವಳಿಕೆ ಪ್ರೀತಿ, ಆದರ ಹುಟ್ಟಲು ಸಹಾಯಕವಾಗಿದೆ ಎಂದರು. ಸಾಹಿತಿ ಮೋಹನ ಹಬ್ಬು ಮಾತನಾಡಿ, ಭಾಷಾ ಬಾಂಧವ್ಯ ಹುಟ್ಟು ಹಾಕಲು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಯೋಜಿತವಾಗಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿವೃತ್ತ ಹಿರಿಯ ಉಪನ್ಯಾಸಕ ಎ.ಎಚ್.ಶೇಖ್ ಲಾಯನ್ಸ್ ಕ್ಲಬ್ ಸಾಮಾಜಿಕ ಸೇವೆಯ ಜೊತೆಗೆ ಇಂತಹ ಅರ್ಥಪೂರ್ಣ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ ಕಾರ್ಯವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ವಿಠ್ಠಲ ಗಾಂವಕರ ಕನ್ನಡ ಭಾಷೆಯ ಹಿರಿಮೆ-ಗರಿಮೆಗಳ ಬಗ್ಗೆ ವರ್ಣಿಸಿದರು. ಲೇಖಕ ಮಂಜರ್ ಸೈಯದ್ ಮಾತನಾಡಿ, ಈ ನೆಲದಲ್ಲಿ ಹುಟ್ಟಿರುವ ನಾವೆಲ್ಲ ನಮ್ಮ ಭಾಷೆಯ ಜೊತೆ ಕನ್ನಡದ ಬಗ್ಗೆ ಪ್ರೀತಿ ಗೌರವ ಇರಬೇಕೆಂದರು. ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕಿ ಶಮೀಮಾಬಾನು, ಎಸ್.ಡಿ.ಎಂ.ಸಿ ಅಧ್ಯಕ್ಷ ಸೈಯದ್ ಫಿರಜಾದೆ, ಲಾಯನ್ಸಿನ ಕಾರ್ಯದರ್ಶಿ ಎಸ್.ಆರ್.ಉಡುಪಿ, ಖಜಾಂಚಿ ಚೈನ್ ಸಿಂಗ್, ಡಾ.ಕರುಣಾಕರ, ಓಂ ಪ್ರಕಾಶ, ಗಣೇಶ ದೇಸಾಯಿ, ಸಂಜಯ ಅರುಂಧೇಕರ, ನಿವೃತ್ತ ಶಿಕ್ಷಕ ರಫೀಕ್ ಶೇಖ್, ವಿವಿಧ ಶಾಲಾ ಶಿಕ್ಷಕರು, ನಾಗರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಅಬ್ದುಲ್ ರಹೀಮರ ಪ್ರಾಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಾಯಿಕಾ ಫಿರಜಾದೆ ನಾಥ್ ಪ್ರಸ್ತುತಪಡಿಸಿದರು. ಅರ್ಫಾ ಸಂಗಡಿಗರು ಸ್ವಾಗತಗೀತೆ ಹಾಡಿದರು. ಶಿಕ್ಷಕ ಆನಂದು ವಿ. ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ಹಿರಿಯ ಲಾಯನ್ಸ್ ಸದಸ್ಯ ಮಹಾಂತೇಶ ರೇವಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.