ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯಿತಿ ಎದುರುಗಡೆ ರಸ್ತೆ ಬೀದಿಯಲ್ಲಿ ವಜ್ರಳ್ಳಿ ಗ್ರಾಮ ಪಂಚಾಯತದ ಪಂಚಾಯತದ ಮಾಜಿ ಅಧ್ಯಕ್ಷರಿಬ್ಬರು ಕೈಕೈ ಮಿಲಾಯಿಸಿಕೊಂಡ ಘಟನೆ ನಡೆದಿದೆ.
ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು, ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷ ಗಜಾನನ ಭಟ್ಟ ಸೂತ್ರೆ ಕಳಚೆ ಮತ್ತು ಇನ್ನೋರ್ವ ಮಾಜಿ ಅಧ್ಯಕ್ಷ ವಿ.ಎನ್.ಭಟ್ಟ ನಡುವೆ ಈ ಘಟನೆ ನಡೆಯುವ ಮೂಲಕ ರಾಜಕೀಯದ ಗುಂಪುಗಾರಿಕೆ ಪ್ರದರ್ಶನಗೊಂಡಿದೆ.
ಮೂರನೇ ವ್ಯಕ್ತಿಯೋರ್ವ ಮಧ್ಯೆ ಪ್ರವೇಶಿಸುವ ಮೂಲಕ ಗಲಾಟೆ ಮಿತಿ ಮೀರುವ ಸಂದರ್ಭ ತಪ್ಪಿದೆ. ಗಜಾನನ ಭಟ್ಟ ಸೂತ್ರೆ ಶಾಸಕ ಹೆಬ್ಬಾರರ ಪರಮಾಪ್ತರಾಗಿದ್ದು, ವಿ.ಎನ್.ಭಟ್ ಎಂಬುವವರು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ನಡೆಸಿದ್ದಾರೆಂದು ಹೆಬ್ಬಾರರು ಆಪಾದಿಸಿ ಹೈಕಮಾಂಡಿಗೆ ಸಲ್ಲಿಸಿದ್ದ ದೂರಿನಲ್ಲಿದ್ದ ವ್ಯಕ್ತಿಯಾಗಿದ್ದಾರೆ.
ಇಷ್ಟೇ ಅಲ್ಲದೇ ಪಂಚಾಯತದಲ್ಲಿ ಕಳೆದ ಕೆಲ ಸಮಯದಿಂದ ಬೇರೆ ಬೇರೆ ಕಾರಣಗಳಿಗಾಗಿ ಆಂತರಿಕ ಕಲಹ, ಅಭಿವೃದ್ಧಿ ಕಾಮಗಾರಿ ವಿಷಯದಲ್ಲಿ ಪರಸ್ಪರ ಕೆಸೆರೆರೆಚಿಕೊಳ್ಳುವುದು ನಡೆಯುತ್ತಲೇ ಇದೆ ಎಂದು ತಿಳಿದುಬಂದಿದೆ. ಪಂಚಾಯತ ಕ್ರಿಯಾ ಯೋಜನೆ ಸಭೆ ಬಳಿಕ ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋಗಿದ್ದು, ಈ ಹಿಂದೆಯೂ ಹಲವು ಬಾರೀ ಇಬ್ಬರ ಮಧ್ಯೆ ಸಣ್ಣಪುಟ್ಟ ಘರ್ಷಣೆ ನಡೆದಿತ್ತೆನ್ನಲಾಗಿದೆ.
ಚುನಾವಣೆ ಮುಗಿದ ನಂತರ ಆಗಾಗ ತಲೆ ಎತ್ತಿ ನಿಲ್ಲುವ ಇಂತಹ ರಾಜಕೀಯ ಬೆಳವಣಿಗೆಗಳು ಇದೀಗ ವಜ್ರಳ್ಳಿಯಿಂದ ಪ್ರಾರಂಭವಾಗಿದೆ. ಮೂಲ ಬಿಜೆಪಿಗರು ಹಾಗೂ ಹೆಬ್ಬಾರ್ ನಡುವೆ ಇರುವ ನಡುವಿನ ಮನಸ್ತಾಪ, ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆಯೆನ್ನುವುದಕ್ಕೆ ಇದು ಸದ್ಯದ ತಾಜಾ ನಿದರ್ಶನ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಂತೂ ಈ ಬಣ ರಾಜಕೀಯ ತಾರಕಕ್ಕೇರಿ ಏನೆಲ್ಲ ನಡೆದಿತ್ತೆನ್ನುವುದು ಗೊತ್ತಿರುವ ಸಂಗತಿ. ಇದಕ್ಕೆಲ್ಲ ಪುಷ್ಟಿ ಎನ್ನುವಂತೆ ಸೋಮವಾರ ಸಂಜೆ ವಜ್ರಳ್ಳಿಯ ಗ್ರಾಮ ಪಂಚಾಯಿತಿ ಎದುರುಗಡೆ ಘಟನೆ ನಡೆದಿದೆ. ಬಹಳ ದಿನಗಳಿಂದ ಇಂತದೊಂದು ಘಟನೆ ನಡೆಯಬಹುದೆಂದು ಜನ ತಮ್ಮ ತಮ್ಮೊಳಗೆ ಅಂದುಕೊಂಡಿದ್ದ ಸಂಗತಿ ನಡೆದು ಹೋಗಿದೆ ಎಂದಿದ್ದಾರೆ.
ಈ ಬಣ ರಾಜಕೀಯ ಒಣ ಪ್ರತಿಷ್ಠೆ ಸೋಮವಾರದ ಕೆಡಿಸಿ ಸಭೆಯಲ್ಲೂ ಇಂತಹ ಆರೋಪದ ವಿಚಾರಗಳೇ ಚರ್ಚೆಗೆ ಗ್ರಾಸವಾಗಿದ್ದವು. ವಜ್ರಳ್ಳಿಯ ವಿಷಯದ ಚರ್ಚೆ ಗುಂಪು ಗುಂಪಾಗಿಯೇ ಸಚಿವರ ಬಳಿ ಬಂದು ಹೇಳಿದ್ದು, ಕೆಲ ಹೊತ್ತು ಸುಮ್ಮನೆ ಕೂತು ಆಲಿಸಿದ ಸಚಿವರಿಗೂ ಇವರ
ಗುಂಪುಗಾರಿಕೆ ವಿಷಯ ಎಲ್ಲಿಂದ ತಿಳಿಯಿತೋ ಏನೋ ? ಇವರು ನಿವೇದಿಸುತ್ತಿರುವ ಸಂಗತಿಯನ್ನು ಜಿಲ್ಲಾಧಿಕಾರಿ ಮತ್ತು ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಹೆಗಲಿಗೇರಿಸಿ ತಣ್ಣಗೆಗೊಳಿಸಿದರು.
ವಜ್ರಳ್ಳಿ ಗ್ರಾಮ ಪಂಚಾಯತದಲ್ಲಿ ಕ್ರಿಯಾಯೋಜನೆ ರೂಪಿಸುವ ಸಂಬಂಧ ಏರ್ಪಟ್ಟ ಸಭೆಯು ಮುಗಿದ ನಂತರ ಘಟನೆ ನಡೆದು ವಿಷಯ ಒಂದಕ್ಕೊಂದು ತಳಕು ಹಾಕಿಕೊಳ್ಳುವಂತೆ ಮಾಡಿದೆ.