ಕುಮಟಾ: ಪಟ್ಟಣದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.
ಈ ವೇಳೆ ಮಾತನಾಡಿ ವಿದ್ಯಾರ್ಥಿಗಳು ಶಾಲೆಗಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಮಕ್ಕಳಲ್ಲಿರಲಿ ಅಥವಾ ಪ್ರೌಢರಲ್ಲಿರಲಿ, ಜೀವನದಲ್ಲಿ ಆರೋಗ್ಯ ಒಂದಿದ್ದರೆ ಏನನ್ನಾದರೂ ಸಾಧಿಸಬಹುದು. ಆರೋಗ್ಯಯುತ ಜೀವನಕ್ಕೆ ಆಟೋಟ ಸ್ಪರ್ಧೆಗಳು ಅತಿಮುಖ್ಯ. ನಮ್ಮ ಜಿಲ್ಲೆಯಲ್ಲಿ ಉತ್ತಮ ಕ್ರೀಡಾಪಟುಗಳಿದ್ದಾರೆ, ತರಬೇತುದಾರರೂ ಇದ್ದಾರೆ. ಕ್ರೀಡಾಕೂಟಗಳಿಗೆ ಹಾಗೂ ಕ್ರೀಡಾಪಟುಗಳ ಸಾಧನೆಗೆ ಪೂರಕವಾಗುವ ಸುವ್ಯವಸ್ಥಿತ ಮೈದಾನ ಒದಗಿಸುವುದಕ್ಕಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಶಾಸಕ ದಿನಕರ್ ಶೆಟ್ಟಿ ಮಾತನಾಡಿ, 2023-24ನೆ ಸಾಲಿನ ಪ್ರೌಢಶಾಲೆಗಳ ಜಿಲ್ಲಾಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಕುಮಟಾ ಆತಿಥ್ಯ ವಹಿಸಿರುವುದು ಸಂತೋಷದ ಸಂಗತಿ. ಇಲ್ಲಿ ಕ್ರೀಡಾಕೂಟವನ್ನು ಸಂಘಟಿಸಲು ಶಿಕ್ಷಕರು ಶ್ರಮವಹಿಸಿದ್ದು, ಮೈದಾನವನ್ನು ಅಚ್ಚುಕಟ್ಟಾಗಿ ಸಿದ್ಧಗೊಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೆರಡೂ ಅತಿಮುಖ್ಯ. ಆಟೋಟಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನ ಸಾಧ್ಯವಾಗುತ್ತದೆ. ಕ್ರೀಡಾಸ್ಫೂರ್ತಿಯೊಂದಿಗೆ ಆಟಗಳಲ್ಲಿ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ಕುಮಟಾ ಪುರಸಭಾ ಸದಸ್ಯ ಸೂರ್ಯಕಾಂತ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್, ಕುಮಟಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಧೀರು ಶಾನಭಾಗ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್. ಬಿ. ನಾಯಕ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಎಚ್. ಬಿ. ನಾಯಕ, ಬಿ. ಆರ್. ಸಿ. ಸಮನ್ವಯಾಧಿಕಾರಿ ರೇಖಾ ನಾಯ್ಕ, ಜಿಲ್ಲೆಯ ಎಲ್ಲ ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕರು, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.