ಹೊನ್ನಾವರ : ವೇದಗಣಿತವನ್ನು ಕರಗತ ಮಾಡಿಕೊಂಡರೆ ಕಂಪ್ಯೂಟರ್’ಗಿಂತ ವೇಗವಾಗಿ ಗಣಿತವನ್ನು ಮಾಡಬಹುದು. ಇಂಗ್ಲೀಷ್ ವಿಶ್ವಮಾನ್ಯ ಭಾಷೆಯಾಗಿದೆ. ಇದರಲ್ಲಿ ಸುಲಭವಾಗಿ ಮಾತನಾಡಬೇಕಾದರೆ ಇಂಗ್ಲಿಷ್ ವ್ಯಾಕರಣವನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಬೇಕು ಎಂದು ವೇದಗಣಿತ ಪ್ರವೀಣರು, ಲೇಖಕರು, ಪ್ರಕಾಶಕರೂ ಆದ ಬೆಳಗಾವಿಯ ಪ್ರೊ.ಕುಶ್. ಎಂ. ದುರ್ಗಿಯವರು ನುಡಿದರು.
ತಾಲೂಕಿನ ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ “ವ್ಯಕ್ತಿತ್ವ ವಿಕಸನ ಶಿಬಿರ”ದಲ್ಲಿ ಮುಖ್ಯ ತರಬೇತುದಾರರಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಅಧಿಕಾರಿ ಎಂ ಎಸ್ ಹೆಗಡೆ ಗುಣವಂತೆಯವರು ಮಾತನಾಡಿ ಇಂಗ್ಲೀಷ್ ಭಾಷೆಯನ್ನು ಹಾಗೂ ವೇದಗಣಿತವನ್ನು ತಮ್ಮದಾಗಿಸಿಕೊಂಡರೆ ವಿಶ್ವದ ಯಾವ ದೇಶದಲ್ಲಾದರೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು, ಉದ್ಯೋಗವನ್ನು ಪಡೆಯಬಹುದು ಎಂದು ನುಡಿದರು.
ಪ್ರೊ.ಕುಶ್. ಎಂ. ದುರ್ಗಿಯವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನೇಹಾ ನಾಯ್ಕ ಸ್ವಾಗತಿಸಿದಳು. ನಿಧಿ ಗೌಡ ವಂದಿಸಿದಳು. ಶಾಲಾ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.