ಯಲ್ಲಾಪುರ: ಪಟ್ಟಣದ ರವಿಂದ್ರನಗರದ ಶಿರಸಿ ರಸ್ತೆಯ ಪಕ್ಕ ಅಸಮರ್ಪಕ ಕಾಮಗಾರಿಯಿಂದಾಗಿ ಸೋಮವಾರ ಸಂಜೆ ಸುರಿದ ಮಳೆಗೆ ಗಟಾರ ನೀರು ಮನೆ, ಹೋಟೆಲ್, ಅಂಗಡಿಗಳಿಗೆ ನುಗ್ಗಿ ಸ್ಥಳಿಯ ನಿವಾಸಿಗಳು ಪರದಾಡಿದರು.
ಮಳೆ ಒಮ್ಮೆಲೆ ರಭಸವಾಗಿ ಸುರಿದಿದ್ದು, ಶಿರಸಿ ರಸ್ತೆಯ ಪಿ.ಎಲ್.ಡಿ ಬ್ಯಾಂಕ್ ಎದುರಿನ ಬಡಾವಣೆಯಲ್ಲಿ ಗಟಾರ ನೀರು ಮನೆಗಳಿಗೆ, ಹೋಟೆಲ್, ಶ್ರೀಮಾತಾ ಡ್ರೈವಿಂಗ್ ಸ್ಕೂಲ್ ಸುತ್ತಮುತ್ತಲಿನ ಕಟ್ಟಡಗಳ ಒಳಕ್ಕೆ ನುಗ್ಗಿದ್ದರಿಂದ ನೀರು ಹೊರ ಹಾಕಲು ಜನ ಪ್ರಯಾಸಪಟ್ಟರು.
ಎಪಿಎಂಸಿ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಗಟಾರ ಕಾಮಗಾರಿ ಉಳಿದೆಲ್ಲ ಕಡೆ ಆಗುತ್ತಿದ್ದು, ಈ ಪ್ರದೇಶದಲ್ಲಿ ಹಿಂದೆ ಅಳವಡಿಸಿದ್ದ ಪೈಪ್ ಕಿತ್ತು, ಬದಿಗೆ ಹಾಕಿ ವರ್ಷವೇ ಕಳೆದಿದೆ. ಸುತ್ತಮುತ್ತಲಿನ ಪಕ್ಕಾ ಗಟಾರ ಕೆಲಸ ನಡೆದಿದ್ದು, ಈ ಪ್ರದೇಶದಲ್ಲಿ ಕಾಮಗಾರಿ ಆಗುವುದು ಬಾಕಿ ಇದೆ.
ಮೊದಲಿದ್ದ ಪೈಪ್ ತೆಗೆದಿದ್ದು,ಹೊಸ ಗಟಾರ ಆಗದೇ ಇರುವುದು ಅವ್ಯವಸ್ಥೆಗೆ ಕಾರಣವಾಗಿದ್ದು, ಮಳೆಗೆ ಗಟಾರ ನೀರು ನುಗ್ಗಿರುವ ಬಗ್ಗೆ ನಿವಾಸಿಗಳು ಬೇಸರಿಸಿದ್ದಾರೆ.
ಕಾರಣ ಈ ಬಗ್ಗೆ ಲೊಕೊಪಯೊಗಿ ಇಲಾಖೆಯವರು ಗಮನಹರಿಸಿ, ಈ ಪ್ರದೇಶದಲ್ಲಿ ತುರ್ತು ಕಾಮಗಾರಿ ಕೈಗೊಂಡು ಮನೆಗೆ ಅಂಗಡಿಗಳಿಗೆ ನೀರು ನುಗ್ಗುವುದನ್ನು ತಡೆಯುವ ಬಗ್ಗೆ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.