ಶಿರಸಿ: ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗಾಗಿ ಆಗ್ರಹಿಸಿ ಸಮಾಜ ಸೇವಕ ಅನಂತಮೂರ್ತಿ ಹೆಗಡೆ ಹಮ್ಮಿಕೊಂಡ ಪಾದಯಾತ್ರೆಯು ಐದು ದಿನಗಳನ್ನು ಪೂರೈಸಿದ್ದು ಇಂದು ಕುಮಟಾ ತಾಲೂಕಿನ ಬರ್ಗಿಯಿಂದ ಹೊರಟು ಅಂಕೋಲಾ ನಗರವನ್ನು ತಲುಪಿದೆ. ಈ ಬಗ್ಗೆ ಮಾತನಾಡಿದ ಪಾದಯಾತ್ರೆಯ ರೂವಾರಿಯಾದ ಅನಂತಮೂರ್ತಿ ಹೆಗಡೆ, ನವೆಂಬರ್ 2 ರಂದು ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದಿಂದ ಆರಂಭಗೊಂಡ ನಮ್ಮ ಪಾದಯಾತ್ರೆ ಕಳೆದ ಐದು ದಿನಗಳಿಂದ ಸಾಗುತ್ತಿದ್ದು ಮಾರ್ಗಮಧ್ಯ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು.
ಕುಮಟಾದ ಬರ್ಗಿಯಿಂದ ಹೊರಟ ಪಾದಯಾತ್ರೆ ಹಿರೇಗುತ್ತಿ, ಮಾದನಗೇರಿ, ಶಿರೂರು ಮಾರ್ಗವಾಗಿ ಚಲಿಸಿ ಅಂಕೋಲಾ ನಗರವನ್ನು ತಲುಪಿದ್ದೇವೆ. ಮಾರ್ಗಮಧ್ಯ ಹಿರೇಗುತ್ತಿಯಲ್ಲಿ ಸ್ಥಳೀಯರಾದ ನೀಲಪ್ಪ ಗೌಡ, ಸುಧಾಕರ್ ಭಂಡಾರಿ, ಕಮಲಾಕರ್ ಹರಿಕಾಂತ, ಸುಧಾಕರ ಹಿರೇಗುತ್ತಿ, ರಮಾಕಾಂತ ಬಾಲಪುಡ್ತಿ ಹಾಗೂ ಊರನಾಗರಿಕರು ಪಾದಯಾತ್ರೆಗೆ ಭವ್ಯ ಸ್ವಾಗತ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದ್ದಾರೆ.
ನಂತರ ಪಾದಯಾತ್ರೆಯೂ ಹಿರೇಗುತ್ತಿ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಸ್ಥಳೀಯ ಮುಖಂಡರಾದ ರಾಮು ಕೆಂಚನ್, ದೇವಿದಾಸ ನಾಯ್ಕ, ಗ್ರಾಪಂ ಸದಸ್ಯ ಆನಂದ್ ನಾಯಕ, ಹರೀಶ ನಾಯ್ಕ, ಜಗದೀಶ ನಾಯ್ಕ ಸೇರಿದಂತೆ ಇನ್ನಿತರರು ನಮ್ಮನ್ನು ಸ್ವಾಗತಿಸಿ ತಾವು ಈ ಹೋರಾಟವನ್ನು ಬೆಂವಲಿಸುವುದಾಗಿ ತಮ್ಮ ಬೆಂಬಲ ಯಾವಾಗಲೂ ಇದೆ ಎಂದು ಪಾದಯಾತ್ರೆಯಲ್ಲಿ ತಮ್ಮ ಹೆಜ್ಜೆಹಾಕಿದ್ದಾರೆ.
ಹಾಗೆ ಸಾಗಿದ ಪಾದಯಾತ್ರೆಯೂ ಮಧ್ಯಾಹ್ನ ಸುಮಾರಿಗೆ ಅಂಕೋಲಾ ತಾಲೂಕಿನ ಶಿರೂರು ತಲುಪಿದ್ದು ಅಲ್ಲಿ ಊರ ಗ್ರಾಮಸ್ಥರು ಭವ್ಯ ಸ್ವಾಗತ ನೀಡಿ ಪಾದಯಾತ್ರೆಯನ್ನು ಬೆಂಬಲಿದರು. ಹಾಗೆಯೇ ಶಿರಸಿ ತಾಲೂಕಿನ ಉಲ್ಲಾಳಕೊಪ್ಪದಿಂದ ಬಂದ ಅನಂತ ಭಟ್, ಸುದರ್ಶನ ಭಟ್, ಶಶಿಕಾಂತ್ ಭಟ್, ಎಸ್.ಜಿ.ಭಟ್, ನರಸಿಂಹ ಭಟ್ , ಗಣಪತಿ ಭಟ್ ಹೀಗೆ ಇನ್ನೂ ಹಲವರು ನಮ್ಮೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿ ತಮ್ಮ ಬೆಂಬಲವನ್ನು ನೀಡಿದ್ದು, ಇದು ಅಂಕೋಲಾ ನಗರವನ್ನು ನಮ್ಮ ಪಾದಯಾತ್ರೆಯೂ ತಲುಪಿದ್ದು, ಅಂಕೋಲಾ ನಗರದಲ್ಲಿ ವಾಸ್ತವ್ಯವಾಗಲಿದ್ದೇವೆ, ನಾಳೆ ಅಂಕೋಲಾದಿಂದ ಅಮದಳ್ಳಿಯವರೆಗೆ ಪಾದಯಾತ್ರೆಯೂ ಮುಂದೆ ಸಾಗಲಿದೆ ಎಂದು ಅನಂತಮೂರ್ತಿ ಹೆಗಡೆ ಎಂದು ಹೇಳಿದರು.
ಅನಂತಮೂರ್ತಿ ಹೆಗಡೆಯವರೇ ಇದೇ ಹೋರಾಟವನ್ನು ನೀವು ನಿರಂತರವಾಗಿ ಮಾಡಿದರೇ ಮುಂದೆ ನೀವು ಜಿಲ್ಲೆಯಲ್ಲಿ ಜನನಾಯಕನಾಗಿ ಹೊರಹೊಮ್ಮುತ್ತೀರಿ, ಜಿಲ್ಲೆಯಲ್ಲಿ ಈಗಾಗಲೇ ನಾಯಕತ್ವದ ಕೊರತೆಯಿದೆ. ಜನರಿಗೆ ತೀರಾ ಅವಶ್ಯವಾಗಿ ಬೇಕಾದ ವ್ಯವಸ್ಥೆ ಎಂದರೆ ಅದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ನಿಮಗೆ ನೀಡುತ್ತೇವೆ.
ನೀಲಪ್ಪ ಗೌಡ, ಹಿರಿಯ ಮುಖಂಡ ಹಿರೇಗುತ್ತಿ.