ಹೊನ್ನಾವರ : ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ಕಾಳಿಕಾಂಬಾ ಕಮಟೇಶ್ವರ ದೇವಸ್ಥಾನ ಗೋಕರ್ಣದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಿತು. ಜಿಲ್ಲೆಯ ಬೇರೆ ಬೇರೆ ತಾಲೂಕಿನಿಂದ ಬಂದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ತಮ್ಮ ಚಿತ್ರಕಲೆಯನ್ನು ಪ್ರದರ್ಶಿಸಿದರು.
ನಂತರ ನಡೆದ ಸಮಾರಂಭದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಫಲಕ, ನಗದು ಬಹುಮಾನ ನೀಡಿ ಗೌರವಿಸಲಾಯಿತು. ಅಲ್ಲದೇ ಹಾಜರಾದ ಎಲ್ಲರಿಗೂ ಅಭಿನಂದನಾ ಪತ್ರ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಆನಂದ ಜಿ. ಆಚಾರ್ಯ ಮಕ್ಕಳಿಗೆ ಅಭಿನಂದಿಸಿ, ಮಕ್ಕಳು ಸಾಮಾನ್ಯ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಬೇಕು ಮತ್ತು ತಮ್ಮ ಅಭಿರುಚಿಯ ಹವ್ಯಾಸದಿಂದ ಮುನ್ನಡೆಯಬೇಕು, ಸಂಘವು ಸಮಾಜಮುಖಿಯಾದ ಹಲವು ಕಾರ್ಯಗಳನ್ನು ಮಾಡುತ್ತಾ ಬಂದಿದೆ. ದೇವಸ್ಥಾನದ ಅಭಿವೃದ್ಧಿಗೆ ಜನರು ನಮ್ಮನ್ನು ಪ್ರೋತ್ಸಾಹಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ದೇವಾಲಯದ ಅರ್ಚಕ ನಿರಂಜನ ಪುರೋಹಿತ, ದೇವಾಲಯದ ಉಪಾಧ್ಯಕ್ಷರಾದ ಉಮೇಶ ಆಚಾರ್ಯ, ಸಂಘದ ಉಪಾಧ್ಯಕ್ಷರಾದ ಮಂಜಯ್ಯ ಆಚಾರ್ಯ, ಸದಸ್ಯರಾದ ಅಣ್ಣಪ್ಪ ಆಚಾರ್ಯ, ಪ್ರಕಾಶ ಆಚಾರ್ಯ, ಸುಬ್ರಾಯ ಆಚಾರ್ಯ, ಕಾರ್ಯದರ್ಶಿ ಗೋಪಾಲ ಆಚಾರ್ಯ, ಶಿಕ್ಷಕಿ ಶ್ರೀಮತಿ ಮಹಾದೇವಿ ಆಚಾರ್ಯ, ದೇವಸ್ಥಾನ ಕಮೀಟಿ ಕಾರ್ಯದರ್ಶಿ ಮಾರುತಿ ಆಚಾರ್ಯ ಹಾಜರಿದ್ದು ಹಿತವಚನ ಮಾತನಾಡಿದರು. ಚಿತ್ರ ಕಲಾವಿದರಾದ ಮಂಜುನಾಥ ಆಚಾರ್ಯ ಇವರ ಮಾರ್ಗದರ್ಶನದಲ್ಲಿ ನಡೆದ ಸ್ಪರ್ಧೆಯ ನಿರ್ಣಾಯಕರಾಗಿ ಹಿರಿಯ ಚಿತ್ರಕಲಾ ಶಿಕ್ಷಕರಾದ ಉದಯ ಎ.ನಾಯ್ಕ ಮತ್ತು ಭಾಸ್ಕರ ಡಿ. ನಾಯ್ಕ ಭಾಗವಿಸಿದ್ದರು.
ಕಾರ್ಯದರ್ಶಿ ಗೋಪಾಲ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಆಚಾರ್ಯ ಎಲ್ಲರನ್ನು ವಂದಿಸಿದರು. ಸಂಘದ ಸರ್ವ ಸದಸ್ಯರು ಮತ್ತು ಎಲ್ಲ ಸಮಿತಿಯ ಸದಸ್ಯರು ಹಾಜರಿದ್ದು ಸಹಕರಿಸಿದರು. ಶ್ರೀಮತಿ ರೂಪಾ ಆಚಾರ್ಯ ಪ್ರಾರ್ಥನೆ ನೆರವೇರಿಸಿದರು. ಶ್ರೀ ದೇವರಲ್ಲಿ ವಿಶೇಷ ಪೂಜೆ ನಡೆಸಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಲಾಯಿತು.