ಕಾರವಾರ: ಐಆರ್ಬಿಯವರು ಟೋಲ್ ಬಂದ್ ಮಾಡಬೇಕು, ಇಲ್ಲದಿದ್ದರೆ ಹೆದ್ದಾರಿ ಕಾಮಗಾರಿಯನ್ನ ಬೇಗ ಮುಗಿಸಬೇಕು. ಅವರು ಕಾಮಗಾರಿ ಮುಗಿಸುವ ಲಕ್ಷಣ ಕಾಣುತ್ತಿಲ್ಲ. ಜಿಲ್ಲೆಯಲ್ಲಿ ಲೂಟಿ ಮಾಡಲೆಂದೇ ಅವರು ಬಂದಂತೆ ಕಾಣುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಿಡಿಕಾರಿದ್ದಾರೆ.
ಕೆಡಿಪಿ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೊದಲು ಅಗಲೀಕರಣ ಎಂದು ಕಲ್ಲನ್ನ ತೆಗೆದುಕೊಂಡು ತಮಗೆ ಇಷ್ಟೊಂದು ಬೇಡ ಎಂದು ವಾಪಾಸ್ ಕೊಟ್ಟಿದ್ದರು. ಈಗ ಮತ್ತೆ ಕ್ವಾರಿ ಅನುಮತಿಗೆ ಕೇಳಿದ್ದಾರೆ. ಇದನ್ನ ನೋಡಿದರೆ ಅವರು ಲೂಟಿ ಮಾಡಲೆಂದೇ ಬಂದಿದ್ದಾರೆ ಎಂದೆನಿಸುತ್ತದೆ. ಬಿಜೆಪಿಗರು ಐಆರ್ಬಿ ಪರ ನಿಲ್ಲುತ್ತಿದ್ದಾರೆ. ಯಾಕೆ ಎಂದು ಗೊತ್ತಾಗುತ್ತಿಲ್ಲ. ಸಾವಿರಾರು ಜನ ಅವೈಜ್ಞಾನಿಕ ಕಾಮಗಾರಿಯಿಂದ ಮೃತಪಟ್ಟಿದ್ದರೂ ಬಿಜೆಪಿಗರು ಯಾಕೆ ಐಆರ್ಬಿಗೆ ಬೆಂಬಲ ಕೊಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾರಂಭವಾಗಿ 9 ವಷÀðವಾಗಿದೆ. ನಾವು ಐದು ವರ್ಷ ಅವರಿಗೆ ಬೆಂಬಲ ಕೊಟ್ಟಿದ್ದೆವು. ಬಿಜೆಪಿ ಸರ್ಕಾರ ಬಂದ ನಂತರ ಐದು ವರ್ಷ ರಸ್ತೆ ಕಾಮಗಾರಿ ಅವ್ಯವಸ್ಥೆ ಆಗಿದ್ದು, ಈಗ ಅದನ್ನ ಸರಿಪಡಿಸಲು ಹೊರಟಿದ್ದೇವೆ ಎಂದು ಹೇಳಿದರು.
ಶರಾವತಿ ಸೇತುವೆಯನ್ನ ಸರ್ಕಾರ ಮಾಡಿಕೊಡಬೇಕು ಎಂದು ಐಆರ್ಬಿಯವರು ಕೇಳಿದ್ದಾರೆ. ನಾವೇ ಸೇತುವೆ ಮಾಡಿ, ನಾವೇ ರಸ್ತೆ ಮಾಡಿಕೊಟ್ಟು ಅವರು ವಸೂಲಿ ಮಾಡಲು ಹೊರಟಿದ್ದಾರೆ. ಐಆರ್ಬಿಯವರ ಬಳಿ ಏನೂ ಡಾಕ್ಯುಮೆಂಟ್ ಇಲ್ಲ. ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಅವರಿಗೆ ಯಾವ ರೀತಿ ಬೇಕೋ ಹಾಗೆ ವಸೂಲಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.