Slide
Slide
Slide
previous arrow
next arrow

ಸುಳ್ಳು ಆರೋಪಗಳಿಗೆ ಬಲಿಯಾದರೆ ರೆನಿಟಾ?

300x250 AD

ಅಂಕೋಲಾ: ಇಂದಿನ ಸಾರ್ವಜನಿಕ ವ್ಯವಸ್ಥೆಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಮತ್ತು ಜನಸಾಮಾನ್ಯರ ಪರವಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಕ್ಲಿಷ್ಟಕರವಾಗಿದೆ. ಪ್ರಾಮಾಣಿಕವಾಗಿದ್ದರೆ ಇಲ್ಲಸಲ್ಲದ ಆರೋಪಗಳನ್ನು ಎದುರಿಸುವುದು ಕಟ್ಟಿಟ್ಟ ಬುತ್ತಿ. 

ತಾಲೂಕಿನಲ್ಲಿಯೂ ಇತ್ತೀಚಿಗೆ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ರೀತಿಯ ಪ್ರಕರಣಗಳು ಕಂಡುಬರುತ್ತಿವೆ. ಪ್ರಾಮಾಣಿಕ ನಿಷ್ಠುರ ಅಧಿಕಾರಿಗಳಾಗಿದ್ದ ಪಿಎಸ್‌ಐಗಳಾದ ಪ್ರೇಮನಗೌಡ ಪಾಟೀಲ್, ಪ್ರವೀಣಕುಮಾರ, ಲೋಕೋಪಯೋಗಿ ಇಲಾಖೆಯಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಿದ ಶಶಿಕಾಂತ್ ಕೋಳೆಕರ್, ಅಲ್ಪ ಅವಧಿಯಲ್ಲಿಯೇ ಜನರ ಪ್ರೀತಿಗೆ ಪಾತ್ರರಾಗಿದ್ದ ತಹಶೀಲ್ದಾರ್ ಅಶೋಕ ಭಟ್ಟ ವರ್ಗಾವಣೆಗೊಂಡಿದ್ದು ತಾಲೂಕಿನ ಜನತೆಗೆ ಬೇಸರ ಉಂಟುಮಾಡಿತ್ತು. ಇದೀಗ ಹಲವು ವರ್ಷಳಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ಉಡುಪಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ.

ಅಸಲಿಗೆ ರೆನಿಟಾ ಡಿಸೋಜಾ, ಕೋರಿಕೆಯ ಮೇರೆಗೆ ವರ್ಗಾವಣೆಗೊಂಡಿದ್ದಾರೆ. ಆದಾಗಿಯೂ ಕೆಲವರು ಒತ್ತಡದ ಆಧಾರದಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ಊಹಾಪೋಹ ಎಬ್ಬಿಸುತ್ತಿದ್ದು ನೇರವಾಗಿ ಆಡಳಿತ ಪಕ್ಷವನ್ನೇ ಹೊಣೆಯಾಗುವಂತೆ ಮಾಡಿದ್ದಾರೆ. ಪ್ರತಿಭಾವಂತ ಯುವ ಅಧಿಕಾರಿಯಾಗಿರುವ ರೆನಿಟಾ ಡಿಸೋಜಾ ಕಾನೂನು ಬದ್ಧವಾಗಿ ಮೀನುಗಾರರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಪ್ರಯತ್ನ ಮಾಡಿದ್ದರು. ಅದರ ಫಲವಾಗಿಯೇ ಸಾಮಾನ್ಯ ಮೀನುಗಾರರು ಅವರ ವರ್ಗಾವಣೆಗೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ದೋಣಿಗಳ ನವೀಕರಣ, ನಕಲಿ ದಾಖಲೆ, ಫಲಾನುಭವಿಗಳ ಆಯ್ಕೆಯ ದುರುಪಯೋಗ ಮತ್ತಿತರ ವಿಷಯಗಳಲ್ಲಿ ನೇರವಾಗಿ ಕ್ರಮ ಕೈಗೊಂಡಿದ್ದರ ಪರಿಣಾಮ ಕೆಲವು ಮಧ್ಯವರ್ತಿಗಳು ಸಹಾಯಕ ನಿರ್ದೇಶಕರ ವಿರುದ್ಧ ಧ್ವನಿ ಎತ್ತಿದ್ದವು. ಅವರ ಮೇಲೆ ಆರೋಪಗಳ ಸುರಿಮಳೆಯನ್ನು ಗೈದಿದ್ದರೂ ಆರೋಪಗಳಿಗೆ ತಕ್ಕಂತೆ ಅಗತ್ಯ ದಾಖಲೆಗಳನ್ನು ನೀಡಲು ವಿಫಲರಾಗಿದ್ದ ಪರಿಣಾಮ ಆರೋಪಗಳು ಅನಗತ್ಯವಾಗಿ ಸೃಷ್ಟಿಸಿದ ಸುಳ್ಳಿನ ಕಂತೆ ಎನ್ನುವುದು ಗೋಚರವಾದಂತಿತ್ತು. 

300x250 AD

ಈ ಹಿಂದೆ ಪ್ರಭಾವಿ ಮುಖಂಡರಿಗೆ ಮಾತ್ರ ಹೆಚ್ಚಿನ ಸೌಲಭ್ಯಗಳು ದೊರೆಯುತ್ತಿತ್ತು. ಸಹಾಯಕ ನಿರ್ದೇಶಕರ ಕಛೇರಿ ಸಾಮಾನ್ಯ ಮೀನುಗಾರರ ಪಾಲಿಗೆ ಗಗನಕುಸುಮ ಇಲ್ಲವೇ ಕಮಿಷನ್ ಪೀಕುವ ಕೇಂದ್ರವಾಗಿತ್ತು. ಮೀನುಗಾರಿಕೆ ಇಲಾಖೆಯ ಮೂಲಕ ದೊರೆಯುವ ಬಲೆ ಬುಟ್ಟಿ ಜಾಕೆಟ್ ಮತ್ತಿತರ ಸೌಲಭ್ಯಗಳು ನೊಂದಾಯಿತ ಮೀನುಗಾರರಿಗೆ ದೊರೆಯುವ ಸಾಧ್ಯತೆಗಳಿರಲಿಲ್ಲ.

ಪ್ರವಾಹದ ಸಂದರ್ಭದಲ್ಲಿ ದೋಣಿ ನೆರವು ನೀಡಿದ ನೈಜ ಮೀನುಗಾರರಲ್ಲದವರಿಗೂ ಗೌರವಧನ ವಿತರಣೆಯಾಗಿತ್ತು. ಆದರೆ ಕಳೆದ ಐದು ವರ್ಷಗಳಿಂದ ರೆನಿಟಾ ಡಿಸೋಜಾ ಇದಕ್ಕೆಲ್ಲಾ ಕಡಿವಾಣ ಹಾಕಿದ್ದರು. ಮಧ್ಯವರ್ತಿಗಳೇ ಕಚೇರಿಗೆ ಬರುವ ಬದಲು ಸಾಮಾನ್ಯ ಜನರು ನೇರವಾಗಿ ಭೇಟಿ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದರು. ಅವರ ಕಚೇರಿಯಲ್ಲಿ ಜನಸಾಮಾನ್ಯರು ಎದುರುಗಡೆ ಕುರ್ಚಿಯಲ್ಲಿ ಕೂತು ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿತ್ತು. ಇದರಿಂದಾಗಿ ಕೆಲವರ ಕಣ್ಣು ಕೆಂಪಾದ ಪರಿಣಾಮ ಆರೋಪಗಳು ಹುಟ್ಟಿಕೊಂಡಿದ್ದವು. ನಕಲಿ ದಾಖಲೆಗಳನ್ನು ನೀಡಿ ಸೌಲಭ್ಯಗಳನ್ನು ಪಡೆಯುತ್ತಿದ್ದವರು ಸಹ ತಪ್ಪೊಪ್ಪಿಗೆ ಪತ್ರಗಳನ್ನು ಬರೆದು ಕೊಟ್ಟಿದ್ದರು.

ಇಂತಹ ಪ್ರಾಮಾಣಿಕ ಅಧಿಕಾರಿ ವರ್ಗಾವಣೆಗೊಂಡಿರುವುದು ಆಡಳಿತ ಪಕ್ಷದ ವೈಫಲ್ಯವೇ ಆಗಿದೆ. ನಿರಂತರವಾಗಿ ಉತ್ತಮ ಅಧಿಕಾರಿಗಳು ತಾಲೂಕಿನಿಂದ ನಿರ್ಗಮಿಸುತ್ತಿರುವ ಪರಿಣಾಮ ಅಭಿವೃದ್ಧಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಮೀನುಗಾರಿಕೆ ಇಲಾಖೆಯಲ್ಲಿಯೂ ರೆನಿಟಾ ಡಿಸೋಜಾ ಅವರ ಸ್ಥಳಕ್ಕೆ ಇದುವರೆಗೆ ಯಾರನ್ನೂ ವರ್ಗಾವಣೆಗೊಳಿಸಿಲ್ಲ. ಕಾರವಾರದ ಸಹಾಯಕ ನಿರ್ದೇಶಕರಿಗೆ ನಿಯೋಜನೆಯ ಮೇರೆಗೆ ತಾತ್ಕಾಲಿಕ ಅಧಿಕಾರವಹಿಸಲಾಗಿದೆ. ಅವಶ್ಯಕ ಸಂದರ್ಭದಲ್ಲಿ ಮತ್ತೆ ಸಾಮಾನ್ಯ ಮೀನುಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸ್ಥಳೀಯ ಶಾಸಕರು ಮತ್ತು ಸರ್ಕಾರ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿರುವ ಅಧಿಕಾರಿಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕಾಗಿದೆ.

Share This
300x250 AD
300x250 AD
300x250 AD
Back to top