ಶಿರಸಿ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಇಲ್ಲಿನ ಪ್ರಜ್ವಲ ಟ್ರಸ್ಟ್ ಆಯೋಜಿಸಿದ್ದ ‘ದೇವ ಸುಧಾ’ ಆಧ್ಯಾತ್ಮಿಕ ಚಿಂತನೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಡಿವೈನ್ ಪಾರ್ಕ್ ಅಂಗಸಂಸ್ಥೆಯಾದ ವಿವೇಕ ಜಾಗೃತಿ ಬಳಗದ ಮಮತಾ ನಾಯ್ಕ್ ಭಾಗವಹಿಸಿ ‘ಸದ್ಗುರುವಿನ ಸದ್ಭಕ್ತ ಸಶಕ್ತನಾಗಬಾರದೇ’ ಎಂಬ ವಿಷಯದಡಿಯಲ್ಲಿ ಮಾತನಾಡಿದರು. ನಮ್ಮ ಜೀವನದಲ್ಲಿ ಭಗವಂತ ಸದ್ದಿಲ್ಲದೇ ಸುದ್ದಿ ಮಾಡದೇ, ಉಸಿರಾಟ, ಎದೆದೆಬಡಿತ, ರಕ್ತ ಸಂಚಲನ, ಪಂಚೇಂದ್ರಿಯಗಳ ಪೂರ್ಣ ಕೆಲಸಗಳ ಮೂಲಕ ನಮ್ಮ ದೇಹದಲ್ಲಿ ನಿಮಿಷಕ್ಕೆ 96 ಬಾರಿ ಕೆಲಸ ಮಾಡುತ್ತಿರುತ್ತಾನೆ. ದಿನದ 24 ಗಂಟೆಗಳು ಪ್ರತಿ ಕ್ಷಣ ನಮ್ಮೊಡನಿರುವುದು ಭಗವಂತ ಮಾತ್ರ. ಜೀವನದಲ್ಲಿ ನಮ್ಮ ಕುಟುಂಬ, ಬಂಧು ಮಿತ್ರರು, ನೆಂಟರಿಷ್ಟರು, ಹೀಗೆ ವಿವಿಧ ಮೋಹದಲ್ಲಿ ಬಂಧಿಯಾಗಿ ಜೀವನದ ಗುರಿಯನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ಈ ದೇಹವೆನ್ನುವುದು ಭಗವಂತನದು. ಅದು ಅವನಿಂದಲೇ ಪ್ರಾಪ್ತಿಯಾದದ್ದು, ಅವನಿಗೆ ಅರ್ಪಿತವಾಗಬೇಕಾದದ್ದು. ಜೀವನದುದ್ದಕ್ಕೂ ಕಾಣದ ಶಕ್ತಿಯಾಗಿ ನಮ್ಮನ್ನು ಕಾಪಾಡುತ್ತಿರುವ ಭಗವಂತನ ನಾಮ ಸ್ಮರಣೆ ಪ್ರತಿನಿತ್ಯ ಶೃದ್ಧೆಯಿಂದ ಮಾಡಬೇಕು. ರಾಮರಕ್ಷಾ ಸ್ತೋತ್ರ ಪಠಣವಾಗಬೇಕು. ಏಕಾಗ್ರತೆಯಿಂದ ಭಗವಂತನನ್ನು ಪ್ರಾರ್ಥಿಸಿದರೆ ಸಕಲವೂ ಒಳ್ಳೆಯದೇ ಆಗುತ್ತದೆ ಎಂದು ಜೀವನದಲ್ಲಿ ಭಗವಂತನ ನಾಮ ಸ್ಮರಣೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು. ಇದಕ್ಕೂ ಮುನ್ನ ವಿವೇಕ ಜಾಗೃತ ಬಳಗದ ಗೋದಾವರಿ ಡಿವೈನ್ ಪಾರ್ಕ್’ನ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಈ ವೇಳೆ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಮಮತಾ ನಾಯ್ಕ್’ರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿ, ಆಧ್ಯಾತ್ಮಿಕತೆಯಿಂದ, ರಾಮರಕ್ಷಾ ಸ್ತೋತ್ರ ಪಠಣದಿಂದ ತಮ್ಮ ಜೀವನದಲ್ಲಾದ ಬದಲಾವಣೆಗಳನ್ನು ವಿವರಿಸಿದರು. ಟ್ರಸ್ಟ್ ಸದಸ್ಯೆ ನಯನಾ ಹೆಗಡೆ ಸಾಗತಿಸಿದರೆ, ಸುಗಂಧಿ ಗುರುಪ್ರಸಾದ್ ವಂದಿಸಿದರು. ಕಾರ್ಯದರ್ಶಿ ಸುಮಾ ಹೆಗಡೆ ನಿರೂಪಿಸಿದರು. ಈ ವೇಳೆ ಪದಾಧಿಕಾರಿಗಳಾದ ಡಿ.ಜಿ.ಹೆಗಡೆ, ವಿಶ್ವನಾಥ್ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಆರತಿ ಗೈದು, ಭಜನೆಯೊಂದಿಗೆ ಮುಕ್ತಾಯಗೊಳಿಸಲಾಯಿತು.