ಸಿದ್ದಾಪುರ: ನಮ್ಮ ಭಾಷೆ, ಜಲ, ನೆಲ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ತಾಲೂಕಿನ ಕಾನಸೂರಿನ ಗೆಳೆಯರ ಬಳಗದಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸ.ಹಿ.ಪ್ರಾ ಶಾಲೆಯಲ್ಲಿ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿ, ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ತನ್ನದೇ ಆದ ಶ್ರೇಷ್ಠ ವಿಚಾರತೆಯನ್ನು ಹೊಂದಿದೆ. ಅನ್ಯ ಭಾಷಿಕರು ಸ್ವ ಇಚ್ಛೆಯಿಂದ ಕನ್ನಡ ಕಲಿಯುವಂತಾಗಬೇಕು. ಕನ್ನಡವನ್ನು ಪ್ರೀತಿಸುವುದರ ಮೂಲಕ ನಾವೆಲ್ಲರೂ ಭಾಷಾಭಿಮಾನ ಬೆಳೆಸಿಕೊಳ್ಳೋಣ ಎಂದರು.
ಶಿರಸಿಯಲ್ಲಿ ಪ್ರತ್ಯೇಕ ಮೆಡಿಕಲ್ ಕಾಲೇಜು ಹಾಗೂ ಪ್ರತ್ಯೇಕ ಹೈಟೆಕ್ ಆಸ್ಪತ್ರೆ ಆಗಬೇಕು. ನಿತ್ಯ ಹೊರ ಜಿಲ್ಲೆಗಳಿಗೆ 300 ಕ್ಕೂ ಅಧಿಕ ರೋಗಿಗಳು ಚಿಕಿತ್ಸೆಗೆ ತೆರಳುತ್ತಿದ್ದು, ಅವರಿಗೆ ಅನುಕೂಲ ಆಗಬೇಕು ಹಾಗೂ ಜೀವ ಉಳಿಸಲು ನೆರವಾಗಬೇಕು ಎಂದು ಆಗ್ರಹಿಸಿ ಪಾದಯಾತ್ರೆ ನಡೆಸಲಾಗುತ್ತಿದೆ. ಇದಕ್ಕೆ ತಾವೆಲ್ಲರೂ ಬೆಂಬಲ ನೀಡಬೇಕು ಎಂದು ವಿನಂತಿಸಿದರು.
ಮುಖ್ಯ ಅತಿಥಿ ಸ್ಕೋಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ ಮಾತನಾಡಿ, ಪ್ರದೇಶಿಕ ಭಾಷೆಯು ಅನ್ನಕ್ಕೆ ದಾರಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಕನ್ನಡದಲ್ಲಿ ಅವಕಾಶ ಸಿಗಲಿಲ್ಲ, ರಾಜ್ಯದಲ್ಲಿ ನೆಲೆ ಸಿಗಲಿಲ್ಲ ಎಂದರೆ ಬೇರೆ ರಾಜ್ಯಕ್ಕೆ ಅಥವಾ ಬೇರೆ ದೇಶಕ್ಕೆ ತೆರಳುವುದು ಅನಿವಾರ್ಯವಾಗುತ್ತದೆ. ಮಾತೃಭಾಷೆ ಅನ್ನ, ಬದುಕು ಕೊಡುವ ಭಾಷೆಯಾಗಬೇಕು. ಕನ್ನಡವು ಅನ್ನ ನೀಡಿ, ಬದುಕು ಕಟ್ಟಿಕೊಟ್ಟು, ಭವಿಷ್ಯ ರೂಪಿಸಿದ ಭಾಷೆಯಾಗಿದೆ ಎಂದರು.
ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಂಡ ಸತ್ಯ. ನಮ್ಮಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚಾಗುತ್ತಿದೆ. 8 ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡ ಭಾಷೆ ಪಡೆದಿದೆ. ಕನ್ನಡಕ್ಕೆ ಅಷ್ಟೊಂದು ಗೌರವ ಮತ್ತು ಹೆಮ್ಮೆಯಿದೆ ಎಂದ ಅವರು, ಆಧುನಿಕ ತಂತ್ರಜ್ಞಾನವು ಅತ್ಯಂತ ವೇಗವಾಗಿ ಬೆಳೆಯುತ್ತಿರುವುದಿಂದ ನಮ್ಮ ಯೋಜನಾ ಶಕ್ತಿಯು ಕುಬ್ಜಬಾಗುತ್ತಿದೆ. ಕೇವಲ ಅಂಕಗಳಿಕೆ ಶಿಕ್ಷಣ ವ್ಯವಸ್ಥೆಯಲ್ಲಿರುವುದು ಅತ್ಯಂತ ದುರಂತ. ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಲಿಸಬೇಕೆಂದು ಸರ್ಕಾರ ಆದೇಶ ಮಾಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಕಾನಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಶ್ಮೀ ಹಿರೇಮಠ, ಯಶಸ್ವಿ ಕ್ರೀಡಾಪಟು ಯಶಸ್ ಪ್ರವೀಣ ಕುರುಬರ ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಗ್ರಾ.ಪಂ ಅಧ್ಯಕ್ಷೆ ಅನಿತಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಸದಸ್ಯರಾದ ಮನೋಜ ಶಾನಭಾಗ, ಶಶಿಪ್ರಭಾ ಹೆಗಡೆ, ವೀರಭದ್ರ ಜಂಗಣ್ಣನವರ, ಶಶಿಕಾಂತ ನಾಮಧಾರಿ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ಟ, ಕುಳವೆ ಗ್ರಾ.ಪಂ ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ, ಗೆಳೆಯರ ಬಳಗದ ರತ್ನಾಕರ ಭಟ್ಟ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಂಘಟನೆಯ ರಾಜು ಕಾನಸೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಗುರುರಾಜ ನಾಯ್ಕ ನಿರೂಪಿಸಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಳಿಗ್ಗೆ ಕಾನಸೂರಿನಿಂದ ನಾಣಿಕಟ್ಟಾದ ವರೆಗೆ ಬೈಕ್ ಹಾಗೂ ರಿಕ್ಷಾದವರಿಂದ ನಡೆದ ರ‍್ಯಾಲಿಯು ಗಮನಸೆಳೆಯಿತು.