ಸಿದ್ದಾಪುರ: ತಾಲ್ಲೂಕಿನಾದ್ಯಂತ ಗ್ರಾಮ ಪಂಚಾಯತಿಗಳಲ್ಲಿ ಜರುಗುವ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡಿಗೆ ಅಭಿಯಾನ, ವಾರ್ಡ್ ಹಾಗೂ ಗ್ರಾಮ ಸಭೆಗಳಲ್ಲಿ ಗ್ರಾಮೀಣ ಜನರು ಸಕ್ರಿಯವಾಗಿ ಭಾಗವಹಿಸಿ ತಮಗೆ ಅಗತ್ಯವಿರುವ ಕೂಲಿ ಹಾಗೂ ವೈಯಕ್ತಿಕ ಕಾಮಗಾರಿಗಳ ಬೇಡಿಕೆಗಳನ್ನು ಸಲ್ಲಿಸುವ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜ್ ಹಿತ್ತಲಕೊಪ್ಪ ಹೇಳಿದರು.
ತಾಲ್ಲೂಕಿನ ಕವಂಚೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆ ಹಿನ್ನಲೆಯಲ್ಲಿ ಆಯೋಜಿಸಲಾದ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ ಮನೆ-ಮನೆ ಜಾಥಾ ನಡೆಸಿ ಕರಪತ್ರ ಹಂಚುವ ಮುಖಾಂತರ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರು ಕೂಲಿಗಾಗಿ ವಲಸೆ ಹೋಗುವುದನ್ನು ತಪ್ಪಿಸಿ ಸ್ವಂತ ಗ್ರಾಮದಲ್ಲೇ ಕೆಲಸ ನೀಡಿ ಶಾಶ್ವತ ಆಸ್ತಿ ಸೃಜನೆ ಮಾಡುವುದು ಮಹಾತ್ಮಗಾಂಧಿ ನರೇಗಾ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಗ್ರಾಮ ಪಂಚಾಯತಿಯಿಂದ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಚೀಟಿ ವಿತರಿಸಿ ಹೆಣ್ಣು-ಗಂಡಿಗೆ ಸಮಾನವಾಗಿ ರೂ. 316 ಕೂಲಿ ಮೊತ್ತದಡಿ ವರ್ಷದಲ್ಲಿ 100 ದಿನ ಕೂಲಿ ಕೆಲಸನೀಡಲಾಗುತ್ತಿದ್ದು, ಬರಗಾಲ ಘೋಷಣೆಯಾದ ಕಾರಣ 150 ದಿನ ಕೂಲಿ ಕೆಲಸ ಒದಗಿಸಲಾಗುತ್ತಿದೆ ಎಂದರು.
ಜೊತೆಗೆ ಪ್ರಸಕ್ತ ವರ್ಷದಿಂದ ವೈಯಕ್ತಿಕ ಕಾಮಗಾರಿಗಳಿಗೆ ಈವರೆಗಿದ್ದ 2.50 ಲಕ್ಷ ರೂ. ಸಹಾಯ ಧನದಮೊತ್ತವನ್ನು ರೂ.5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಅರ್ಹ ಪ್ರತಿ ಕುಟುಂಬಕ್ಕೆ ಅಡಿಕೆ, ತೆಂಗು, ಗೇರು, ಕಾಳಮೆಣಸು, ಲವಂಗ, ಚಕ್ಕೆ(ದಾಲ್ಚಿನ್ನಿ), ಕಾಫಿ, ಡ್ರಾಗನ್ ಫ್ರೋಟ್, ದ್ರಾಕ್ಷಿ, ಸೀಬೆ, ಮಾವು, ಪಪ್ಪಾಯ, ಚಿಕ್ಕು(ಸಪೋಟ) ನೇರಳೆ, ಹುಣಸೆ, ನಿಂಬೆ, ಸೀತಾಫಲ, ದಾಳಿಂಬೆ, ಅಂಜೂರ, ಹಲಸು, ನೆಲ್ಲಿ, ಕರಿಬೇವು, ವೀಳೆದೆಲೆ ಹಾಗೂ ಇನ್ನಿತರ ತೋಟಗಾರಿಕೆ ಬೆಳೆಗಳು, ಕೃಷಿ ಹೊಂಡ, ಜೈವಿಕ ಅನಿಲ ಘಟಕ, ಕಂದಕ ಬದು ನಿರ್ಮಾಣ, ದನದ ಕೊಟ್ಟಿಗೆ, ಕುರಿ/ಮೇಕೆ/ಹಂದಿ ಕೊಟ್ಟಿಗೆ, ಬಚ್ಚಲು ಗುಂಡಿ, ಕೋಳಿ ಶೆಡ್, ತೆರೆದ ಬಾವಿ, ಕೊಳವೆ ಬಾವಿ ಮರುಪೂರಣ ಘಟಕ, ಅಜೋಲಾ ಘಟಕ ಸೇರಿದಂತೆ ಅನೇಕ ಕಾಮಗಾರಿ ನೀಡಿ ಆರ್ಥಿಕ ಪುನಶ್ಚೇತನಕ್ಕೆ ಪ್ರಯತ್ನಿಸಲಾಗುತ್ತಿದೆ. ಅದ್ದರಿಂದ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಪ್ರತಿಯೊಬ್ಬರೂ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡಿಗೆ ಅಭಿಯಾದಲ್ಲಿ ಬೇಡಿಕೆ ಸಲ್ಲಿಸುವ ಮೂಲಕ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್‌ನ ಜಿಲ್ಲಾ ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಮಾತನಾಡಿ, ಕೆಲಸದ ಪ್ರಮಾಣ, ಪ್ರತಿ ಕುಟುಂಬಕ್ಕೆ ವೈಯಕ್ತಿಕ ಕಾಮಗಾರಿಯ ಗರಿಷ್ಠ ಮೊತ್ತ ಹೆಚ್ಚಿಸಿರುವುದು, ವಿಶೇಷ ಚೇತನರು, ಗರ್ಭಿಣಿ-ಬಾಣಂತಿಯರು, ಲಿಂಗತ್ವ ಅಲ್ಪಸಂಖ್ಯಾತರು, ಹಿರಿಯ ನಾಗರಿಕರಿಗೆ ಕೆಲಸದಲ್ಲಿನ ರಿಯಾಯಿತಿ, ಉದ್ಯೋಗ ಚೀಟಿ ಸಮೀಕ್ಷೆ, 2024-25ನೇ ಸಾಲಿಗೆ ಬೇಡಿಕೆ ಸಲ್ಲಿಸುವಿಕೆ ಸೇರಿದಂತೆ ಇನ್ನಿತರೇ ವಿಷಯಗಳ ಬಗ್ಗೆ ಗ್ರಾಮಸ್ಥರಿಗೆ, ಕೂಲಿಕಾರರಿಗೆನರೇಗಾ ಯೋಜನೆಯ ಸಮಗ್ರ ಮಾಹಿತಿ ನೀಡಿದರು.
ವೇದಿಕೆ ಕಾರ್ಯಕ್ರಮದ ನಂತರ ಸ್ವತಃ ತಾಪಂ ಇಒ ಅವರ ನೇತೃತ್ವದಲ್ಲಿ ಮನೆ-ಮನೆ ಜಾಥಾ ನಡೆಸಿ ಯೋಜನೆಯ ಮಾಹಿತಿ ಒಳಗೊಂಡ ಕರಪತ್ರಗಳನ್ನು ಮನೆ-ಮನೆಗೆ ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು. ಜೊತೆಗೆ ಗ್ರಾಮಸ್ಥರಿಂದ ಬೇಡಿಗೆ ಸಂಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷಿ ವಿಶಾಲಾಕ್ಷೀ ಜೆಡ್ಡಿ, ಸದಸ್ಯ ರಾಜು ಕಟ್ಟೆಮನೆ, ಜಿ.ಟಿ. ನಾಯ್ಕ್, ಅಭಿವೃದ್ಧಿ ಅಧಿಕಾರಿ ಕವನಕುಮಾರ್, ಎಸ್‌ಡಿಎ ಬಸವರಾಜ್ ಕುಸೂರು, ಟಿಎಇ ಸಂದೀಪ, ಬಿಎಪ್‌ಟಿ ವಿನಾಯಕ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.