ಸಿದ್ದಾಪುರ: ತಾಲೂಕಿನ ಗೋಳಗೋಡದ ಸಿದ್ಧಿವಿನಾಯಕ ದೇವಾಲಯದ (ಹೆಗ್ಗರಣಿ) ಪ್ರಾಂಗಣದಲ್ಲಿ ಹವ್ಯಾಸಿ ಯಕ್ಷಕಲಾ ಬಳಗ ಹಾಗೂ ದೇವಾಲಯದ ಆಡಳಿತ ಮಂಡಳಿಯ ಆಶ್ರಯದಲ್ಲಿ ನಡೆದ ‘ಶಬರಾರ್ಜುನ’ ಮತ್ತು ‘ಊರ್ವಶಿ ಶಾಪ’ ತಾಳಮದ್ದಲೆ ಪ್ರೇಕ್ಷಕರನ್ನು ರಂಜಿಸಿತು.
ಹಿಮ್ಮೇಳದಲ್ಲಿ ಭಾಗವಗತರಾಗಿ ಪ್ರಸನ್ನ ಭಟ್ಟ ಬಾಳ್ಕಲ, ಎಂ.ಪಿ.ಹೆಗಡೆ ಉಲ್ಲಾಳಗದ್ದೆ, ಮೃದಂಗದಲ್ಲಿ ಎನ್.ಜಿ.ಹೆಗಡೆ ಯಲ್ಲಾಪುರ ಉತ್ತಮವಾಗಿ ಕಾರ್ಯನಿರ್ವಹಿಸಿದರು. ತಾಳಮದ್ದಳೆ ಕಾರ್ಯಕ್ರಮವನ್ನು ವೇ.ಮೂ ವೆಂಕಟರಮಣ ಭಟ್ಟ ಕೋಡಖಂಡ ಉದ್ಘಾಟಿಸಿದರು. ದೇವಾಲಯದ ಆಡಳಿತ ಮಂಡಳಿಯ ನಾಗಪತಿ ಭಟ್ಟ ನೀರಗಾನು ಸ್ವಾಗತಿಸಿ, ವಂದಿಸಿದರು.
ಯಕ್ಷಕಲಾ ಬಳಗದ ನಾಗಪತಿ ಹೆಗಡೆ ಕಡ್ನಮನೆ ಪಾತ್ರವರ್ಗ ಪರಿಚಯಿಸಿದರು. ಶಬರಾರ್ಜುನದ ಅರ್ಜುನನಾಗಿ ವಿಶ್ವೇಶ್ವರ ಭಟ್ಟ ಸುಣ್ಣಂಬಳ, ಶಬರನಾಗಿ ಶಂಭು ಶರ್ಮ ವಿಟ್ಲ, ಊರ್ವಶಿ ಶಾಪದ ಅರ್ಜುನನಾಗಿ ವಾಸುದೇವ ರಂಗ ಭಟ್ಟ, ಊರ್ವಶಿಯಾಗಿ ಗಣಪತಿ ಭಟ್ಟ ಸಂಕದಗುಂಡಿ, ದೇವೇಂದ್ರನಾಗಿ ಸೀತಾರಾಮ ಚಂದು ಶಿರಸಿ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದರು. ಸುಮಾರು 200ಕ್ಕೂ ಅಧಿಕ ಪ್ರೇಕ್ಷಕರು ತಾಳಮದ್ದಲೆ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.