Slide
Slide
Slide
previous arrow
next arrow

ಕಾಂಗ್ರೆಸ್ ಸರ್ಕಾರ ಉರುಳಿಸಲು ಸದ್ದಿಲ್ಲದೇ ತಂತ್ರ ಹೆಣೆಯಲಿಳಿದ ಬಿಜೆಪಿ…?

300x250 AD

ಕಾರವಾರ: ರಾಜ್ಯದಲ್ಲಿ ಆಪರೇಷನ್ ಹಸ್ತ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಇದರ ನಡುವೆ ಕಾಂಗ್ರೆಸ್ ಸರ್ಕಾರವನ್ನ ಉರುಳಿಸಿ ಬಿಜೆಪಿ ಸರ್ಕಾರ ರಚಿಸಲು ಸದ್ದಿಲ್ಲದೇ ಪ್ರಯತ್ನಕ್ಕೆ ಇಳಿದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಪಕ್ಷದ 50 ಶಾಸಕರನ್ನ ಆಪರೇಷನ್ ಕಮಲದ ಮೂಲಕ ಸೆಳೆಯುವ ಕಾರ್ಯಕ್ಕೆ ಕೆಲ ನಾಯಕರು ಮುಂದಾಗಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನ ಮಣಿಸಿ ಅಧಿಕಾರಕ್ಕೆ ಬಂದಿತ್ತು. 136 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಪಕ್ಷೇತರ ಸದಸ್ಯರ ಬೆಂಬಲ ಸೇರಿ ಒಟ್ಟು 140 ಶಾಸಕರ ಬೆಂಬಲದಿಂದ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಆಡಳಿತ ನಡೆಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೆಲ ದಿನಗಳ ನಂತರ ಆಪರೇಷನ್ ಹಸ್ತಕ್ಕೆ ಕೈ ಹಾಕಿತ್ತು. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿದ್ದ ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಭೈರತಿ ಬಸವರಾಜ್ ಸೇರಿದಂತೆ ಹಲವರನ್ನ ಮತ್ತೆ ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಕಾರ್ಯಕ್ಕೆ ಕೆಲ ನಾಯಕರು ಕೈ ಹಾಕಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.

ಇದರ ನಡುವೆ ಚಿತ್ರದುರ್ಗದ ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನ ಕಾಂಗ್ರೆಸ್ ತನ್ನತ್ತ ಸೆಳೆದು ಇತ್ತಿಚ್ಚಿಗೆ ಪಕ್ಷಕ್ಕೆ ಸೇರಿಸಿಕೊಂಡಿತ್ತು. ಸದ್ಯ ಇದರ ನಡುವೆ ರಾಜ್ಯ ರಾಜಕೀಯ ವಲಯದಲ್ಲಿ ಮತ್ತೊಂದು ವಿಚಾರ ಚರ್ಚೆಗೆ ಬಂದಿದೆ. ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರ್ಕಾರವನ್ನ ಉರುಳಿಸಲು ಸದ್ದಿಲ್ಲದೇ ಪ್ರಯತ್ನಕ್ಕೆ ಇಳಿದಿದೆ ಎನ್ನಲಾಗಿದೆ. ಸುಮಾರು 50 ಕಾಂಗ್ರೆಸ್ ಶಾಸಕರನ್ನ ತನ್ನತ್ತ ಸೆಳೆಯಲು ಬಿಜೆಪಿ ಪ್ಲ್ಯಾನ್ ಮಾಡಿದ್ದು ಪಕ್ಷಕ್ಕೆ ಬರುವ ಶಾಸಕರಿಗೆ ಬಾರಿ ಆಫರ್ ಕೊಡಲು ಸಿದ್ದತೆ ಮಾಡಿಕೊಂಡಿದೆ ಎನ್ನಲಾಗಿದೆ. ಈಗಾಗಲೇ ಹಲವು ಕಾಂಗ್ರೆಸ್ ಶಾಸಕರನ್ನ ಸೆಳೆಯುವ ಕಾರ್ಯಕ್ಕೆ ಇಳಿದಿದ್ದು ಕಾಂಗ್ರೆಸ್ ಕೆಲ ನಾಯಕರ ಮೇಲೆ ಅಸಮಾಧಾನ ಹೊಂದಿರುವ ಹಾಗೂ ಬಿಜೆಪಿ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿರುವ ಶಾಸಕರು ಬಿಜೆಪಿ ನಾಯಕರ ಸಂಪರ್ಕಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.

ಇನ್ನು ಕಾಂಗ್ರೆಸ್ ಸರ್ಕಾರವನ್ನ ಕೆಡವಿ ಬಿಜೆಪಿ ಸರ್ಕಾರವನ್ನ ತರುವ ಈ ಪ್ಲ್ಯಾನ್ ನಲ್ಲಿ ಈ ಹಿಂದೆ ಸಮ್ಮಿಶ್ರ ಸರ್ಕಾರವನ್ನ ಕೆಡವಿದ ಕೆಲವರು ಮುಂದಾಳತ್ವ ತೆಗೆದುಕೊಂಡಿದ್ದಾರೆ ಎನ್ನುವ ಚರ್ಚೆ ನಡೆದಿದೆ. ಇನ್ನೊಂದೆಡೆ ಐವತ್ತು ಶಾಸಕರನ್ನ ತನ್ನತ್ತ ಬಿಜೆಪಿ ಸೆಳೆದು ರಾಜ್ಯದಲ್ಲಿ ಸರ್ಕಾರ ಕೆಡವಿ ರಾಷ್ಟçಪತಿ ಆಡಳಿತವನ್ನ ತಂದು ಮತ್ತೊಮ್ಮೆ ಚುನಾವಣೆ ಎದುರಿಸುವ ಪ್ಲ್ಯಾನ್ ಸಹ ಮಾಡಲಾಗಿದೆ ಎನ್ನಲಾಗಿದ್ದು ಲೋಕಸಭಾ ಚುನಾವಣೆಯ ನಂತರ ಈ ಪ್ಲ್ಯಾನ್ ಚುರುಕುಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್!:

ರಾಜ್ಯದಲ್ಲಿ ನಾಲ್ಕು ದಿಕ್ಕಿನಲ್ಲೂ ಆಪರೇಷನ್ ಕಮಲ ನಡೆಯುತ್ತಿದೆ. ಈಗಾಗಲೇ ಬಿಜೆಪಿಯವರು 50 ಶಾಸಕರ ಸಂಪರ್ಕ ಮಾಡಿದ್ದಾರೆ ಎಂದು  ಮಂಡ್ಯದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಾಣಿಗ ದಾವಣಗೆರೆಯಲ್ಲಿ ಹೇಳಿಕೆ ನೀಡಿದ್ದಾರೆ.

300x250 AD

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಆಪ್ತ ಸಹಾಯಕ ಸಂತೋಷ್ ಅವರಿಂದ ಈ ಕೆಲಸ ನಡೆಯುತ್ತಿದೆ ಎಂದು ಆರೋಪ ಮಾಡಿದ ಅವರು, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ನೀಡುವುದಾಗಿ ಬಿಜೆಪಿಯವರು ಆಮಿಷವೊಡ್ಡುತ್ತಿದ್ದಾರೆ. ಮೈಸೂರು ಮತ್ತು ಬೆಳಗಾವಿ ಭಾಗದ ಬಿಜೆಪಿ ನಾಯಕರು ಡಿಮ್ಯಾಂಡ್ ಇಡುತ್ತಿದ್ದಾರೆಯ ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ನಮ್ಮ ಶಾಸಕ ಮಿತ್ರರೊಬ್ಬರನ್ನು ಸಂತೋಷ್ ಭೇಟಿ ಆಗಿದ್ದಾನೆ. ಯಾರು ಕಾಂಗ್ರೆಸ್ ಜೆಡಿಎಸ್‌ನನ್ನು ತೆಗೆದ್ರೋ ಅದೇ ಟೀಂ ಮತ್ತೆ ಸಕ್ರಿಯವಾಗಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ, ಬೆಳಗ್ಗೆ ಎದ್ದ ತಕ್ಷಣ ಕಾಂಗ್ರೆಸ್ ನವರನ್ನು ಹುಡುಕುವುದೇ ಕಾಯಕವಾಗಿಬಿಟ್ಟಿದೆ. ನಮ್ಮ ಶಾಸಕರ ಜೊತೆ ಮಾತನಾಡಿದ ಆಡಿಯೋ ಮತ್ತು ವಿಡಿಯೋ ಇದೆ. ಸಂದರ್ಭ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ. ಸ್ಪೆಷಲ್ ಫ್ಲೈಟ್ ಮಾಡ್ತೀವಿ, ಮಂತ್ರಿ ಮಾಡುತ್ತೀವಿ. ಅಮಿತ್ ಶಾ ಭೇಟಿ ಮಾಡಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅಮಿತ್ ಶಾ ಹೆಸರು ಹೇಳಿ ಆಸೆ ಹುಟ್ಟಿಸುವ ಕೆಲಸ ಮಾಡಲಾಗುತ್ತಿದೆ. 49 ಶಾಸಕರು ನಮ್ಮ ಕಡೆ ಇದ್ದಾರೆ. ನೀವು 50ನೇ ಶಾಸಕ ಅಂತಾ ಹೇಳ್ತಾರೆ. ನಾಲ್ಕು ದಿಕ್ಕುಗಳಿಂದಲೂ ಈ ಪ್ರಯತ್ನ ನಡೆಯುತ್ತಿದೆ. ಈ ವಿಚಾರ ಸಿಎಂ ಹಾಗೂ ಡಿಸಿಎಂ ಗಮನಕ್ಕೆ ತಂದಿದ್ದೇವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ಆದ್ರೆ ನಮ್ಮ ಶಾಸಕರು ಸಹ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಗಮನಕ್ಕೆ ತಂದಿದ್ದಾರೆ ಎಂದು ರವಿಕುಮಾರ್ ಗಾಣಿಗ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯ ಇಬ್ಬರು ಶಾಸಕರು ಲಿಸ್ಟ್‌ನಲ್ಲಿ!:

ಕಾಂಗ್ರೆಸ್ ಸರ್ಕಾರವನ್ನ ಕೆಡವಿ ಬಿಜೆಪಿ ಸರ್ಕಾರ ಮಾಡುವುದಾದರೆ ಜಿಲ್ಲೆಯ ಇಬ್ಬರು ಶಾಸಕರ ಹೆಸರು ಸಹ ಲಿಸ್ಟ್ನಲ್ಲಿದೆ ಎನ್ನುವ ಮಾತು ಕೇಳಿ ಬಂದಿದೆ. ಓರ್ವ ಶಾಸಕ ಕಾಂಗ್ರೆಸ್ ನಾಯಕರ ಮೇಲೆ ಅಸಮಾಧಾನ ಹೊಂದಿದ್ದು, ಇನ್ನೋರ್ವ ಶಾಸಕ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಸೇರಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಇನ್ನು ಆಪರೇಷನ್ ಕಮಲಕ್ಕೆ ಕೈ ಹಾಕಿರುವ ಟೀಮ್ ಈ ಇಬ್ಬರು ಶಾಸಕರನ್ನ ಸಂಪರ್ಕ ಮಾಡಿ ತನ್ನತ್ತ ಸೆಳೆಯುವ ಕಾರ್ಯ ಮಾಡಿದೆ ಎನ್ನಲಾಗಿದೆ. ದೊಡ್ಡ ಮಟ್ಟದಲ್ಲಿ ಆಪರೇಷನ್ ಕಮಲ ನಡೆದು ಸರ್ಕಾರ ಬೀಳುವುದೇ ಆದರೆ ಜಿಲ್ಲೆಯ ಇಬ್ಬರು ಶಾಸಕರು ಬಿಜೆಪಿ ಸೇರುವ ಸಾಧ್ಯತೆಯೂ ತಳ್ಳಿ ಹಾಕುವಂತಿಲ್ಲ ಎನ್ನುವುದು ರಾಜಕೀಯ ಚರ್ಚೆಯಾಗಿದೆ.

Share This
300x250 AD
300x250 AD
300x250 AD
Back to top