ಶಿರಸಿ: ಸಂಘದ ಹಿಂದಿನ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ಅಂದಿನ ಪ್ರಧಾನ ವ್ಯವಸ್ಥಾಪಕರಿಂದ ನಡೆದಿರುವ ಕಾನೂನು ಬಾಹಿರ ಕೃತ್ಯಗಳು, ಪೋಟನಿಯಮ ಉಲ್ಲಂಘನೆ ಇತ್ಯಾದಿ ನಿಯಮ ಬಾಹಿರ ಚಟುವಟಿಕೆಗಳ ಕುರಿತು ಈ ಹಿಂದಿನ ಅವಧಿಯ ವ್ಯವಹಾರಗಳ ಕುರಿತು ಸೂಕ್ತ ಮರು ಲೆಕ್ಕಪರಿಶೋಧನೆ ನಡೆಸಿ ಅದರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಲು ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ವಿಶೇಷ ಸರ್ವಸಾಧಾರಣ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅ.25ರಂದು ಸಂಘದ ಪ್ರಧಾನ ಕಛೇರಿಯಲ್ಲಿ ಗೋಪಾಲಕೃಷ್ಣ ವಿ. ವೈದ್ಯ ಮತ್ತಿಘಟ್ಟಾ ಅಧ್ಯಕ್ಷತೆಯಲ್ಲಿ ಜರುಗಿದ ವಿಶೇಷ ಸರ್ವಸಾಧಾರಣ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದ್ದು, 2022-23ನೇ ಸಾಲಿನ ಶಾಸನಬದ್ಧ ಲೆಕ್ಕಪರಿಶೋಧಕರ ನೇಮಕಾತಿ ಮರುಪರಿಶೀಲನೆ, ಮರು ಲೆಕ್ಕ ಪರಿಶೋಧನೆಗೆ ಲೆಕ್ಕಪರಿಶೋಧಕರ ನೇಮಕಾತಿ, ರವೀಶ ಅ. ಹೆಗಡೆ ನಡೆಸಿರುವ ಕಾನೂನು ಬಾಹಿರ ಕೃತ್ಯಗಳ ಕುರಿತು ಕ್ರಮ ಜರುಗಿಸುವುದು ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯಿಸಲು ವಿಶೇಷ ಸರ್ವಸಾಧಾರಣ ಸಭೆ ಆಯೋಜಿಸಲಾಗಿತ್ತು.
2022-23ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅಂಗೀಕರಿಸಿದ ಶಾಸನಬದ್ಧ ಲೆಕ್ಕಪರಿಶೋಧಕರ ನೇಮಕಾತಿ ನಿರ್ಣಯದ ಕುರಿತು ಮರು ಪರಿಶೀಲಿಸಿ 2023-24ನೇ ಸಾಲಿಗೆ ಶಾಸನಬದ್ಧ ಲೆಕ್ಕ ಪರಿಶೋಧಕರನ್ನು ನೇಮಕ ಮಾಡುವುದರ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ ಸಂಘದ ಹಿಂದಿನ ಪ್ರಧಾನ ವ್ಯವಸ್ಥಾಪಕರು ನಿವೃತ್ತಿವರೆಗಿನ ಅವಧಿಯ ವೇತನವನ್ನು ಪೂರ್ಣ ಪ್ರಮಾಣದಲ್ಲಿ ಪಡೆದಿರುವುದು, ಅಡಿಕೆ ಬೆಳೆಗಾರರಲ್ಲದವರಿಗೆ ಪೋಟನಿಯಮಕ್ಕೆ ವಿರುದ್ಧವಾಗಿ ಸಾಲ ನೀಡಿರುವುದು, ಸೂಕ್ತ ಭದ್ರತೆ ಇಲ್ಲದೆ ಸಾಲ ನೀಡಿರುವುದು, ಅವಶ್ಯಕತೆಗಿಂತ ಹೆಚ್ಚಾಗಿ ಸಂಘಕ್ಕೆ ಆಸ್ತಿಯನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ನೀಡಿ ಖರೀದಿ ಮಾಡಿರುವುದು, ಆಡಳಿತ ಮಂಡಳಿಯವರ ನಿಕಟವರ್ತಿ ವ್ಯಕ್ತಿಗಳಿಗೆ ಬಡ್ಡಿ ರಿಯಾಯಿತಿ ನೀಡಿರುವುದು ಇತ್ಯಾದಿ ಈ ಹಿಂದಿನ ಅವಧಿಗಳಲ್ಲಿ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಕಾನೂನು ಬಾಹಿರ ವ್ಯವಹಾರಗಳು ಸಂಘದ ಸದರಿ ಸಾಲುಗಳ ಶಾಸನಬದ್ಧ ಲೆಕ್ಕ ಪರಿಶೋಧನಾ ವರದಿಗಳಲ್ಲಿ ಹಾಗೂ ಆಂತರಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖವೇ ಆಗದಿರುವುದರಿಂದ ಸಂಘದ ವ್ಯವಹಾರಗಳ ಕುರಿತು ಆಂತರಿಕವಾಗಿ ಲೆಕ್ಕ ಪರಿಶೋಧನೆ ನಡೆಸಿ ಮಾಹಿತಿ ಹಾಗೂ ವರದಿಯನ್ನು ನೀಡಲು ಬೆಂಗಳೂರಿನ ಮನೋಹರ ಚೌದರಿ & ಅಸೋಸಿಯೇಟ್ಸ್ ಇವರನ್ನು ನೇಮಕ ಮಾಡಿಕೊಳ್ಳಲು ಹಾಗೂ ಸಂಘದ 2023-24ನೇ ಸಾಲಿನ ಲೆಕ್ಕ ಪರಿಶೋಧನೆಗೆ ಬಿ.ವಿ. ರವೀಂದ್ರನಾಥ, ಚಾರ್ಟರ್ಡ್ ಅಕೌಂಟಂಟ್ಸ್, ಸಾಗರ, ಇವರನ್ನು ಲೆಕ್ಕ ಪರಿಶೋಧಕರನ್ನಾಗಿ ನೇಮಕ ಮಾಡಲು ವಿಶೇಷ ಸರ್ವಸಾಧಾರಣ ಸಭೆಯಲ್ಲಿ ಸರ್ವ ಸದಸ್ಯರಿಂದ ಒಪ್ಪಿಗೆ ಪಡೆಯಲಾಗಿದೆ.
ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವಿ. ವೈದ್ಯ ಮತ್ತಿಘಟ್ಟಾ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡುವುದರೊಂದಿಗೆ ಸಭೆಯನ್ನು ಪ್ರಾರಂಭಿಸಿದರೆ, ಉಪಾಧ್ಯಕ್ಷರಾದ ಎಮ್. ಎನ್. ತೋಟಿಮನೆ ಅಡಿಕೆ ಎಲೆಚುಕ್ಕೆ ರೋಗದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು. ಸಂಘದ ಪ್ರಭಾರಿ ಪ್ರಧಾನ ವ್ಯವಸ್ಥಾಪಕರಾದ ವಿಜಯಾನಂದ ಸು. ಭಟ್ಟ ಸಭೆಯ ವಿಷಯಪಟ್ಟಿಯ ಮಾಹಿತಿಯನ್ನು ಸಭೆಗೆ ತಿಳಿಸಿದರು. ಸಂಘದ ಹಣಕಾಸು ಮತ್ತು ವ್ಯಾಪಾರಿ ಮಾರ್ಗದರ್ಶಕ ಪ್ರಕಾಶ ಎಸ್. ಹೆಗಡೆ ಹುಳಗೋಳ ತಮ್ಮ ಮತ್ತು ಸಂಘದ ನಡುವಿನ ಅವಿನಾಭಾವ ಸಂಬಂಧದ ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು. ಕೊನೆಯಲ್ಲಿ ಸಂಘದ ನಿರ್ದೇಶಕರಾದ ರವೀಂದ್ರ ಜೆ. ಹೆಗಡೆ ಹಿರೆಕೈ ವಂದನೆ ಅರ್ಪಿಸಿದರೆ, ಕಾರ್ಯಕ್ರಮವನ್ನು ಸಂಘದ ಸಿಬ್ಬಂದಿಯಾದ ಗೋಪಾಲ ಹೆಗಡೆ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಘದ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು.