ಸಿದ್ದಾಪುರ: ಹೊನ್ನಾವರ ತಾಲೂಕಿನ, ಚಿಕ್ಕನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, ಅರಣ್ಯ ಸಿಬ್ಬಂದಿಗಳಿಂದ ಅರಣ್ಯವಾಸಿಗಳ ಮೇಲೆ ಜರುಗಿದ ದೌರ್ಜನ್ಯದ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದ್ದಲ್ಲದೇ, ದೌರ್ಜನ್ಯವೆಸಗಿದ ಅರಣ್ಯ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಲು ನಿರ್ಣಯಿಸಲಾಗಿದೆ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಿದ್ದಾಪುರ ತಾಲೂಕಿನ, ತಂಡಾಗುಂಡಿ ಗ್ರಾಮ ಪಂಚಾಯತದ ಹುಕ್ಕಳಿಯಲ್ಲಿ, ಹಿರಿಯ ಹೋರಾಟಗಾರ ಹರಿಹರ ನಾಯ್ಕ ಅಧ್ಯಕ್ಷತೆಯಲ್ಲಿ ಜರುಗಿದ ಅರಣ್ಯ ಅತಿಕ್ರಮಣ ಹೋರಾಟಗಾರರ ಸಭೆಯಲ್ಲಿ ಮೇಲಿನಂತೆ ತೀರ್ಮಾನಿಸಲಾಯಿತು.
ಅರಣ್ಯ ಹಕ್ಕು ಕಾಯಿದೆ ಜ್ಯಾರಿ ಇರುವಂತಹ ಸಂದರ್ಭದಲ್ಲಿ, ಮಾನವೀಯತೆಯನ್ನು ಮೀರಿ ಮಕ್ಕಳ ಮತ್ತು ಮಹಿಳೆಯರ ಮೇಲೆ ದೌರ್ಜನ್ಯವೆಸಗಿ, ಅಮಾನವಿಯತೆಯಿಂದ ವರ್ತಿಸಿರುವ ಅರಣ್ಯ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಇಂತಹ ಘಟನೆಗಳನ್ನು ತೀವ್ರವಾಗಿ ವಿರೋಧಿಸಲಾಗುವುದೆಂದು ಸೀತಾರಾಮ ಹುಲಿಯ ಗೌಡ, ನಾಗಪತಿ ಬೀರ ಗೌಡ, ಮಂಜುನಾಥ ಗಣಪ ನಾಯ್ಕ, ಎಮ್ ಸಿ ಗೌಡ ಮುಂತಾದವರು ಮಾತನಾಡುತ್ತಾ ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯಕ್ಕೆ ತೀವ್ರವಾಗಿ ಖಂಡಿಸಿದ್ದಾರೆ.
ಸಭೆಯಲ್ಲಿ ಭಾರ್ಗವ ಗಣಪಯ್ಯ ನಾಯ್ಕ, ರುದ್ರ ಗೌಡ, ಮಾಭ್ಲೇಶ್ವರ ಕೃಷ್ಣಪ್ಪ ನಾಯ್ಕ, ಟಿಬಿ ಗೌಡ, ರಮೇಶ ಹುಲಿಯಾ ನಾಯ್ಕ, ಹೆರಂಬ ಗೌಡ, ಸೂರಜ್ ನಾಯ್ಕ ಬೀರನಜಡ್ಡಿ, ಮಧುಕೇಶ್ವರ ನಾಯ್ಕ, ಉಮಾಕಾಂತ ಗೌಡ, ಪ್ರಕಾಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಹೊನ್ನಾವರ ಡಿಎಫ್‌ಒ ಕಛೇರಿಗೆ ಮುತ್ತಿಗೆ;
ಅರಣ್ಯ ಸಿಬ್ಬಂದಿಗಳಿಂದ ಹೊನ್ನಾವರದಲ್ಲಿ ಅರಣ್ಯವಾಸಿಗಳ ಮೇಲೆ ಜರುಗುತ್ತಿರುವ ದೌರ್ಜನ್ಯದ ಕುರಿತು ಹೊನ್ನಾವರ ಡಿಎಫ್‌ಓ ಕಛೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.