ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಯಾವ ಮೂಲೆಗೆ ಹೋದರೂ, ವಿದೇಶಿ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ, ಭಾರತದ ಆರ್ಥಿಕತೆ ಏಳಿಗೆ ಬಗ್ಗೆ ಮಾತನಾಡುತ್ತಾರೆ. ಭಾರತವು ವಿಶ್ವದಲ್ಲೇ ಮೂರನೇ ಬೃಹತ್ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಇದರ ಬೆನ್ನಲ್ಲೇ, “ಭಾರತವು 2030ರ ವೇಳೆಗೆ ವಿಶ್ವದಲ್ಲೇ ಮೂರನೇ ಬೃಹತ್ ಆರ್ಥಿಕತೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ” ಎಂದು ಎಸ್&ಪಿ ಗ್ಲೋಬಲ್ ಮಾರ್ಕೆಟ್ ಇಂಟಲಿಜೆನ್ಸ್ ವರದಿ ತಿಳಿಸಿದೆ.
“ಭಾರತದ ಆರ್ಥಿಕತೆಯು ಜಪಾನ್ ಆರ್ಥಿಕತೆಯನ್ನೇ ಮೀರಿಸಲಿದೆ. ಸದ್ಯ ಜಪಾನ್ ಆರ್ಥಿಕತೆಯ ಮೌಲ್ಯವು 4.2 ಲಕ್ಷ ಕೋಟಿ ಡಾಲರ್ ಆಗಿದೆ. ಭಾರತದ ಆರ್ಥಿಕತೆಯ ಮೊತ್ತ 3.5 ಲಕ್ಷ ಕೋಟಿ ಡಾಲರ್ ಇದೆ. ಆದರೆ, 2030ರ ವೇಳೆಗೆ ಭಾರತದ ಆರ್ಥಿಕತೆ ಮೌಲ್ಯವು 7.30 ಲಕ್ಷ ಕೋಟಿ ಡಾಲರ್‌ಗೆ ಏರಿಕೆಯಾಗಲಿದೆ. ಆ ಮೂಲಕ ಜಪಾನ್ ಆರ್ಥಿಕತೆಯನ್ನೇ ಹಿಂದಿಕ್ಕಿ ಭಾರತವು ಜಗತ್ತಿನೇ ಮೂರನೇ ಬೃಹತ್ ವಿತ್ತೀಯ ರಾಷ್ಟ್ರ ಎನಿಸಲಿದೆ” ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೊರೊನಾ ತಂದೊಡ್ಡಿದ ಸವಾಲಿನ ಮಧ್ಯೆಯೂ 2023ರಲ್ಲಿ ಭಾರತದ ಆರ್ಥಿಕತೆಯು ಗಣನೀಯವಾಗಿ ಸುಧಾರಣೆಯತ್ತ ಸಾಗುತ್ತಿದೆ. ಭಾರತದ ಜಿಡಿಪಿಯು 2023-24ನೇ ಆರ್ಥಿಕ ವರ್ಷ ಮುಗಿಯುವ ವೇಳೆಗೆ ಶೇ.6.2ರಿಂದ ಶೇ.6.3ಕ್ಕೆ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದೇ ಗತಿಯ ಬೆಳವಣಿಗೆಯಿಂದಾಗಿ ಭಾರತವು ವಿಶ್ವದ ಬಲಾಢ್ಯ ಆರ್ಥಿಕ ರಾಷ್ಟ್ರಗಳ ಸಾಲಿನಲ್ಲಿ ಮುನ್ನಡೆ ಸಾಧಿಸಲಿದೆ” ಎಂದು ಎಸ್&ಪಿ ಗ್ಲೋಬಲ್ ಮಾರ್ಕೆಟ್ ಇಂಟಲಿಜೆನ್ಸ್ ವರದಿ ತಿಳಿಸಿದೆ.
2014ರಲ್ಲಿ ಭಾರತವು ಜಗತ್ತಿನಲ್ಲಿ 10ನೇ ಬೃಹತ್ ಆರ್ಥಿಕತೆ ಹೊಂದಿದ ರಾಷ್ಟ್ರ ಎನಿಸಿತ್ತು. ಆದರೀಗ, ಭಾರತವು ಜಗತ್ತಿನೇ ಐದನೇ ಬಲಿಷ್ಠ ಆರ್ಥಿಕತೆಯ ರಾಷ್ಟ್ರ ಎನಿಸಿದೆ. ಬ್ರಿಟನ್ ಹಾಗೂ ಫ್ರಾನ್ಸ್ ಆರ್ಥಿಕತೆಯನ್ನೂ ಭಾರತ ಹಿಂದಿಕ್ಕಿದೆ. ಇದರ ಜತೆಗೆ ಭಾರತದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ಏರಿಸುವುದು ಕೂಡ ನರೇಂದ್ರ ಮೋದಿ ಅವರ ಉದ್ದೇಶವಾಗಿದೆ. ಮತ್ತೊಂದೆಡೆ, ಜಗತ್ತಿನ ಆರ್ಥಿಕ ಏಳಿಗೆ ಸ್ಪರ್ಧೆಯಲ್ಲಿ ಜರ್ಮನಿ ಕೂಡ ಹೆಚ್ಚಿನ ಪೈಪೋಟಿ ನೀಡುತ್ತಿದೆ.