ಹೊನ್ನಾವರ: ತಾಲೂಕಿನ ಕಾಸರಕೋಡ್ ರೋಷನ್ ಮೊಹಲ್ಲಾ ಸಮೀಪ ಬೈಕ್‌ಗೆ ಕಾರು ಡಿಕ್ಕಿಯಾಗಿದ್ದು, ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತ ಬೈಕ್ ಸವಾರ ಕೆಳಗಿನೂರು ಅಪ್ಸರಕೊಂಡ ನಿವಾಸಿ ಲಂಬೋದರ ಗೌಡ (30) ಎಂದು ಗುರುತಿಸಲಾಗಿದೆ. ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿರುವಾಗ ಎದುರಿನಿಂದ ಬಂದ ಕಾರ್ ಚಾಲಕ ಅತೀವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿ ಬೈಕ್‌ಗೆ ಗುದ್ದಿದ್ದಾನೆ. ಪರಿಣಾಮ ಬೈಕ್ ಸವಾರ ರಸ್ತೆ ಮೇಲೆ ಬಿದ್ದಿದ್ದಾನೆ. ಅದೇ ವೇಳೆಗೆ ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಸಂಚರಿಸುತ್ತಿದ್ದ ಲಾರಿ ಚಾಲಕ ಅತೀವೇಗ ಹಾಗೂ ನಿಷ್ಕಾಳಜಿಯಿಂದ ವಾಹನ ಚಲಾಯಿಸಿಕೊಂಡು ಬಂದು ಬೈಕ್ ಸವಾರನ ಮೇಲೆ ಹಾಯಿಸಿದ್ದಾನೆ.
ಸವಾರನ ಎಡಗಾಲಿನ ಮೇಲೆ ಲಾರಿ ಹರಿದ ಪರಿಣಾಮ ಸವಾರ ಗಂಭೀರ ಗಾಯಗೊಂಡಿದ್ದ. ಅಪಘಾತ ಪಡಿಸಿದ ಕಾರ್ ಹಾಗೂ ಲಾರಿ ಚಾಲಕರು ಸ್ಥಳದಲ್ಲಿ ವಾಹನ ನಿಲ್ಲಿಸದೇ ವಾಹನ ಸಮೇತ ಪರಾರಿಯಾಗಿದ್ದರು. ಗಾಯಾಳು ಬೈಕ್ ಸವಾರನನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಿವೃ ರಕ್ತಸ್ರಾವದಿಂದಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಅಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಮಂಗಳವಾರ ಸಂಜೆ ಮೃತಪಟ್ಟಿದ್ದಾನೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.