ಜೊಯಿಡಾ: ತಾಲೂಕಿನ ಶಿವಾಜಿ ವೃತ್ತದ ಬಳಿ ಮಾಜಿ ಶಾಸಕ ಸುನೀಲ್ ಹೆಗಡೆ ಮುಂದಾಳತ್ವದಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ಐಟಿ ದಾಳಿ ವೇಳೆ ದೊರೆತ 92 ಕೋಟಿಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಮೀಷನ್ ದಂಧೆ, ವರ್ಗಾವಣೆ ದಂಧೆ, ಕರ್ನಾಟಕ ಜಿಹಾದಿಗಳ ಅಡಗುತಾಣವಾಗಿದೆ. ಅವೈಜ್ಞಾನಿಕ ಗ್ಯಾರಂಟಿಗಳು, ನಕಲಿ ಗಿಫ್ಟ್ ಕಾರ್ಡುಗಳು, ದಾಖಲೆಯಿಲ್ಲದ ಸುಳ್ಳು ಆರೋಪಗಳನ್ನು ಮಾಡಿಯೇ ಅಧಿಕಾರಕ್ಕೇರಿದ ಸಿದ್ದರಾಮಯ್ಯ ಅವರ ಸರ್ಕಾರ, ಅಧಿಕಾರಕ್ಕೇರಿದ ನಂತರ ಮೊದಲು ಮಾಡಿದ ಕೆಲಸವೆಂದರೆ ರಾಜ್ಯವನ್ನು ಕಾಂಗ್ರೆಸ್ ಹೈಕಮಾಂಡ್ನ ಎಟಿಎಂ ಮಾಡಿದ್ದು. ಪ್ರಸ್ತುತ ಸಿದ್ದರಾಮಯ್ಯ ಹಾಗೂ ಡಿಕೆಶಿ ವಾರ್ಷಿಕ 3ರಿಂದ 4 ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದಾಗಿ ಹೈಕಮಾಂಡ್ಗೆ ಮಾತು ಕೊಟ್ಟು ಅಧಿಕಾರದ ಗದ್ದುಗೆಯಲ್ಲಿ ಕೂತ ಇವರು, ಐಟಿ ಇಲಾಖೆ ದಾಳಿ ಮಾಡಿದ ಕಾರಣ ಕಾಂಗ್ರೆಸ್ ಕಲೆಕ್ಷನ್ ಕಳ್ಳಾಟ ಬಯಲಾಗಿದೆ. ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುವ ಇವರು ಮುಂದಿನ ದಿನಗಳಲ್ಲಿ ಅಧಿಕಾರದಿಂದ ಕೆಳಗೆ ಇಳಿಯುವುದು ಖಚಿತ. ಇಂಥ ಜನವಿರೋಧಿ ತುಘಲಕ್ ಸರ್ಕಾರವನ್ನು ಉಗ್ರ ಪ್ರತಿಭಟನೆ ಮಾಡುವುದರ ಮೂಲಕ ಬಿಸಿ ಮುಟ್ಟಿಸುವ ಕೆಲಸ ಆಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಸಂತೋಷ ರೇಡ್ಕರ್, ಪಕ್ಷದ ಗುರಪ್ಪ ಹಣಬರ, ಸಂತೋಷ ಸಾವಂತ, ಸುಭಾಷ ಮಾಜ್ರೆಕರ, ರಾಮಕೃಷ್ಣ ದಾನಗೇರಿ, ಸುಬ್ರಾಯ ಹೆಗಡೆ, ಅಜಿತ್ ಮಿರಾಶಿ, ಗಿರೀಶ್ ನಾಯ್ಕ, ಅನಿಲ ಪಟ್ಟೆ, ಅರುಣ ಕಾಂಬ್ರೆಕರ್, ರೂಪೇಶ ದೇಸಾಯಿ, ಚಂದ್ರಶೇಖರ ಸಾವರಕರ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.