ಶಿರಸಿ: ತಾಲೂಕಿನ ಯಡಳ್ಳಿ ಪಂಚಾಯತ್ ವ್ಯಾಪ್ತಿಯ ಗಿಡಮಾವಿನಕಟ್ಟಾದಲ್ಲಿ ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಊರಿನ ಎರಡು ಯುವಕರಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸುವ ಒಂದು ವಿಶೇಷ ಕಾರ್ಯಕ್ರಮವನ್ನು ಶ್ರೀ ಭೂತೇಶ್ವರ ಗೆಳೆಯರ ಬಳಗವು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತದ ಅಧ್ಯಕ್ಷ ಹಾಗೂ ಭೂತೇಶ್ವರ ಗೆಳಯರ ಬಳಗದ ಪ್ರಮುಖರಾದ ಭಾಸ್ಕರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಚಾಯತ ಸದಸ್ಯರಾದ ರವೀಶ್ ಹೆಗಡೆ ಮತ್ತು ಕೇಶವ್ ಹೆಗಡೆ ಭಾಗವಹಿಸಿ, ಸೈನ್ಯಕ್ಕೆ ಆಯ್ಕೆಯಾದ ಜಿತೇಂದ್ರ ಚನ್ನಯ್ಯ ಮತ್ತು ಗುರು ಗಿಡಮಾವಿನಕಟ್ಟಾ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ನಿವೃತ್ತ ಸೇನಾಧಿಕಾರಿ ಹಾಗೂ ಪಂಚಾಯತ ಸದಸ್ಯ ಕೇಶವ ಹೆಗಡೆ ಮಾತನಾಡಿ ಆಯ್ಕೆಯಾದ ಯುವಕರಿಗೆ ಸೈನ್ಯದ ತರಬೇತಿ ಮತ್ತು ಶಿಸ್ತಿನ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದರು. ಇನ್ನೋರ್ವ ಸದಸ್ಯ ರವೀಶ್ ಹೆಗಡೆ ಮಾತನಾಡಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದಕ್ಕೆ ಶ್ರೀ ಭೂತೇಶ್ವರ ಗೆಳೆಯರ ಬಳಗಕ್ಕೆ ಮೊದಲನೆಯದಾಗಿ ಅಭಿನಂದಿಸಿ ಆಯ್ಕೆಯಾದ ಯುವಕರಿಗೆ ಶುಭಕೋರಿದರು. ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಮಾತನಾಡಿ ನಮ್ಮೂರಿನ ಯುವಕರಿಗೆ ಇನ್ನು ಹೆಚ್ಚು ಹೆಚ್ಚು ದೇಶಸೇವೆ ಮಾಡುವ ಅವಕಾಶ ಸಿಗಲಿ ಎಂದು ಹಾರೈಸಿದರು.
ಸೈನ್ಯಕ್ಕೆ ಆಯ್ಕೆಯಾದ ಯುವಕರಿಗೆ ಸನ್ಮಾನಿಸಿ ಇನ್ನೂ ಹೆಚ್ಚು ಹೆಚ್ಚು ಯುವಕರಿಗೆ ಇದು ಪ್ರೇರಣೆಯಾಗುವಂತೆ ಉತ್ತೇಜಿಸುವ ಇಂತಹ ಕಾರ್ಯಕ್ರಮವನ್ನು ಸಂಘಟಿಸಿದ್ದಕ್ಕೆ ಶ್ರೀ ಭೂತೇಶ್ವರ ಗೆಳೆಯರ ಬಳಗಕ್ಕೆ ಸಾರ್ವಜನಿಕರು ಊರಿನ ಹಿರಿಯರು ಧನ್ಯವಾದವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಗೆಳಯರ ಬಳಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು.