ಸಿದ್ದಾಪುರ: ಬದುಕಿ ಬಾಳಬೇಕಾದ ಮನುಷ್ಯನಿಗೆ ಕಲೆ ಮತ್ತು ಸಂಸ್ಕೃತಿಗಳು ಅವಿಭಾಜ್ಯ ಅಂಗ. ಈ ಸಂಸ್ಕಾರ ಇಲ್ಲದವ ಖಂಡಿತಾಗಿಯೂ ಕೋಡು ಬಾಲಗಳಿಲ್ಲದ ಪ್ರಾಣಿಯೇ ಸರಿ. ನಾವು ಮಹತ್ವ ಕೊಡಬೇಕಾದ ಸಂಗತಿಗಳಲ್ಲಿ ಕಲೆಯೂ ಒಂದು ಎಂದು ವೈದಿಕ, ಹಾರ್ಸಿಕಟ್ಟೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಮ್.ಡಿ.ಭಟ್ಟ ಅಗ್ಗೇರೆ ಅಭಿಪ್ರಾಯಪಟ್ಟರು.
ಸಾಂಸ್ಕೃತಿಕ ಸಂಘಟನೆಯಾದ ಕಲಾಭಾಸ್ಕರ ಇಟಗಿಯು ಐದು ದಿನಗಳ ಕಾಲ ತಾಲೂಕಿನಾದ್ಯಂತ ಹಮ್ಮಿಕೊಂಡ ತಾಳಮದ್ದಳೆ ಪಂಚಕ-2023ನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಉತ್ತಮ ಸಮಾಜ ನಿರ್ಮಾಣಕ್ಕೆ ಯಕ್ಷಗಾನ ತಾಳಮದ್ದಳೆಗಳ ಕೊಡುಗೆ ಅನನ್ಯವಾದುದು. ತಾಳಮದ್ದಳೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗೋಣ ಎಂದು ಹೇಳಿದರು.
ಸಾಮಾಜಿಕ ಮುಖಂಡ ಎನ್.ವಿ.ಹೆಗಡೆ ಮುತ್ತಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆಯು ನಮ್ಮ ನಿಜವಾದ ಸ್ವತ್ತು. ಅದನ್ನು ಅಧಿಕಾರಯುತವಾಗಿ ಬಳಸಿಕೊಳ್ಳೋಣ ಎಂದು ಹೇಳಿದರು. ಬಿದ್ರಕಾನು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಸ್ವಾಗತಿಸಿದರು. ನಂತರ ದಕ್ಷಿಣೋತ್ತರಕನ್ನಡ ಜಿಲ್ಲೆಯ ಕಾವಿದರುಗಳಿದ ಕವಿ ಹಲಸಿನಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಭೀಷ್ಮಾರ್ಜುನ’ ತಾಳಮದ್ದಳೆ ಪ್ರದರ್ಶನ ನಡೆಯಿತು. ಸರ್ವೇಶ್ವರ ಹೆಗಡೆ ಮೂರೂರು ಭಾಗವತಿಕೆಯಲ್ಲಿ ಮಿಂಚಿದರು. ನಾಗಭೂಷಣ ರಾವ್ ಹೆಗ್ಗೋಡು, ರಘುಪತಿ ಹೆಗಡೆ ಹೂಡೆಹದ್ದ, ಗಜಾನನ ಹೆಗಡೆ ಸಾಂತುರು ಚಂಡೆ ಮದ್ದಳೆಗಳಲ್ಲಿ ಸಹಕರಿಸಿದರು. ಭೀಷ್ಮನಾಗಿ ಸರ್ಪಂಗಳ ಈಶ್ವರ ಭಟ್ಟ, ಕೃಷ್ಣನಾಗಿ ರಾಧಾಕೃಷ್ಣ ಕಲ್ಚಾರ್, ಕೌರವನಾಗಿ ಪವನ ಕಿರಣ್ಕೆರೆ ಅರ್ಜುನನಾಗಿ ಶ್ರೀನಿವಾಸ ಭಾಗವತ ಮತ್ತಿಘಟ್ಟ, ಅಭಿಮನ್ಯುವಾಗಿ ಇಟಗಿ ಮಹಾಬಲೇಶ್ವರ ಆಖ್ಯಾನವನ್ನು ಕಟ್ಟಿದರು.