ಶಿರಸಿ: ತೋಟಗಾರಿಕಾ ಮಹಾವಿದ್ಯಾಲಯ, ಶಿರಸಿ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಹಾಗೂ ಗೋಡಂಬಿ ಮತ್ತು ಕೋಕೊ ನಿರ್ದೇಶನಾಲಯ ಕೋಚ್ಚಿನ್ ಇವರ ಸಹಯೋಗದಲ್ಲಿ ಅ.19, ಗುರುವಾರ ಬೆಳಿಗ್ಗೆ 10.30 ಗಂಟೆಗೆ ‘ಗೋಡಂಬಿ ಬೆಳೆಯ ಸಮಗ್ರ ನಿರ್ವಹಣೆ ಹಾಗೂ ಮೌಲ್ಯವರ್ಧನೆ ರೈತರಿಗೆ ತರಬೇತಿ ಕಾರ್ಯಕ್ರಮ’ವನ್ನು ಇಲ್ಲಿನ ತೋಟಗಾರಿಕಾ ಮಹಾವಿದ್ಯಾಲಯದ ಪ್ರೇಕ್ಷಾ ಗೃಹದಲ್ಲಿ ಆಯೋಜಿಸಲಾಗಿದೆ.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ವಿಸ್ತರಣಾ ನಿರ್ದೇಶಕ ಡಾ. ಪಿ.ಎಮ್. ಗಂಗಾಧರಪ್ಪ ಉದ್ಘಾಟಿಸಲಿರುವ ಕಾರ್ಯಕ್ರಮದಲ್ಲಿ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ. ಶಾಂತಪ್ಪ ತಿರಕಣ್ಣನವರ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋಡಂಬಿ ಮತ್ತು ಕೋಕೋ ನಿರ್ದೇಶನಾಲಯದ ಉಪ ನಿರ್ದೇಶಕ ದಾದಾಸಾಹೇಬ ದೇಸಾಯಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಬಿ.ಪಿ.ಸತೀಶ, ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಮ್.ಎಚ್.ತಟಗಾರ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಹೆಚ್. ಅಮರನಂಜುಂಡೇಶ್ವರ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಲವು ತಾಂತ್ರಿಕ ಉಪನ್ಯಾಸಗಳನ್ನು ಆಯೋಜಿಸಲಾಗಿದ್ದು, ಗೋಡಂಬಿ ಬೆಳೆಯ ಮಹತ್ವ, ಗೋಡಂಬಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು, ಗೋಡಂಬಿ ತಳಿಗಳು ಹಾಗೂ ಅವುಗಳ ಗುಣಧರ್ಮ, ಗೋಡಂಬಿ ಬೆಳೆಯಲ್ಲಿ ಸಮಗ್ರ ರೋಗ ನಿರ್ವಹಣಿ, ಗೋಡಂಬಿ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆ, ಗೋಡಂಬಿ ಬೆಳೆಯಲ್ಲಿ ಕೊಯ್ಲೋತ್ತರ ತಂತ್ರಜ್ಞಾನ ಮುಂತಾದ ವಿಷಯಗಳ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವ ಆಸಕ್ತರು ಆಗಮಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.