Slide
Slide
Slide
previous arrow
next arrow

ಕೇಂದ್ರ ಸಚಿವ ಪ್ರಹ್ಲಾದ ಜೋಷಿಯಿಂದ ‘ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್’ ಉದ್ಘಾಟನೆ

300x250 AD

ಯಲ್ಲಾಪುರ: ದೊಡ್ಡ ನಗರಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಸಾಕಷ್ಟು ಅವಕಾಶವಿದ್ದರೂ ಸಹ, ತನ್ನ ಹುಟ್ಟೂರಿನಲ್ಲಿ ತನ್ನ ಜನರಿಗಾಗಿ ಶೈಕ್ಷಣಿಕ ಕ್ರಾಂತಿ ಮಾಡಲು ಹೊರಟಿರುವ ಹರಿಪ್ರಕಾಶ ಕೋಣೆಮನೆ ಸಾಹಸ ನಿಜಕ್ಕೂ ಶ್ಲಾಘನೀಯ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.

ಅವರು ಸೋಮವಾರ ಯಲ್ಲಾಪುರದಲ್ಲಿ ವಿಶ್ವದರ್ಶನ ಎಜ್ಯುಕೇಶನ್ ಸೊಸೈಟಿಯಲ್ಲಿ ನೂತನವಾಗಿ ಆರಂಭವಾದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಉದ್ಘಾಟಿಸಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸಾಧನೆಗೆ ಪರಿಶ್ರಮ,ತ್ಯಾಗ ಅವಶ್ಯಕವಾಗಿದೆ. ಕನ್ನಡದ ಪತ್ರಿಕೋದ್ಯಮದಲ್ಲಿ ಬಹುದೊಡ್ಡ ಬದಲಾವಣೆ ತಂದಿದ್ದು ವಿಜಯ ಸಂಕೇಶ್ವರ. ಈ ನಿಟ್ಟಿನಲ್ಲಿ ಮೀಡಿಯಾ ಸ್ಕೂಲ್ ಗೆ ಅವರ ಹೆಸರಿಟ್ಟಿರುವುದು ಸ್ತುತ್ಯಾರ್ಹವಾಗಿದೆ.

ಪತ್ರಕರ್ತನಾದವಗೆ ಎಲ್ಲದಕ್ಕಿಂತ ಹೆಚ್ಚಾಗಿ ಸಾಮಾನ್ಯಜ್ಞಾನ ಅತ್ಯಾವಶ್ಯಕ. ಪ್ರತಿಯೊಂದನ್ನು ವಿಮರ್ಶೆ ಮಾಡುವ, ಕೇಳುವ ಧೈರ್ಯ ಅವಶ್ಯಕವಿದೆ. ಕನಸು ಮತ್ತು ಸಾಧಿಸುವ ಮನಸ್ಸಿದ್ದರೆ ಯಶಸ್ಸು ಸಾಧ್ಯ ಎಂದರು. ಮುಂದೆ ಬರಲಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಭಾರತದ ಬದಲಾವಣೆಗ ಮುನ್ನಡೆಯಬೇಕಿದೆ. ಸದ್ಯದಲ್ಲಿಯೇ ಭಾರತದ ಮೂಲೆ ಮೂಲೆಗೆ 5G ತಲುಪಲಿದ್ದು, ಅತ್ಯಂತ ಕಡಿಮೆ ದರದಲ್ಲಿ ದೇಶವಾಸಿಗಳಿಗೆ ದೊರೆಯಲಿದೆ ಎಂದರು.

ಖ್ಯಾತ ಉದ್ಯಮಿ ಡಾ. ವಿಜಯ ಸಂಕೇಶ್ವರ ಮಾತನಾಡಿ, ತಂತ್ರಜ್ಞಾನ ಬದಲಾಗಬಹುದು ಆದರೆ ಪತ್ರಿಕೋದ್ಯಮಕ್ಕೆ ಎಂದೂ ಸಾವಿಲ್ಲ. ಆಳವಾದ ಅಧ್ಯಯನದಿಂದ ಮಾತ್ರ ಒಳ್ಳೆಯ ಪತ್ರಕರ್ತರಾಗಲು ಸಾಧ್ಯವಿದೆ. ಇಂದು ಜಗತ್ತಿನ ಯಾವ ಭಾಗದಲ್ಲಿದ್ದರೂ ಸ್ಥಳೀಯ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ ಎಂದರು. ತಂತ್ರಜ್ಞಾನ ಸುಧಾರಿಸಿದಷ್ಟು ಪತ್ರಿಕೋದ್ಯಮ ಬದಲಾಗುತ್ತದೆ. ಬದಲಾದ ತಂತ್ರಜ್ಞಾನಕ್ಕೆ ಹೊಂದಿಕೊಂಡಾಗ ಮಾತ್ರ ಉತ್ತಮ ಪತ್ರಕರ್ತರಾಗಬಹುದು. ಹಿಂದಿಗಿಂತಲೂ ಇಂದು ಪ್ರಾಮಾಣಿಕವಾಗಿ ಪತ್ರಿಕೋದ್ಯಮ ನಡೆಸುವುದು ತೀರಾ ಕಷ್ಟಸಾಧ್ಯ. ಕೇಂದ್ರಸರಕಾರದ ಅಸಡ್ಡೆಯ ಕಾರಣದಿಂದಲೂ ಸಹ ಪ್ರಿಂಟ್ ಮೀಡಿಯಾ ಇಂದು ಕಷ್ಟದ ಪರಿಸ್ಥಿತಿಯಲ್ಲಿದೆ. ಉತ್ತಮ ಪತ್ರಿಕೋದ್ಯಮಕ್ಕೆ ಸರಕಾರ ಸಹಕಾರ ತೆರಿಗೆ ಹೊರೆ ಇಳಿಸುವ ಮೂಲಕ ನೀಡಬೇಕು ಎಂದು ಅವರು ಆಗ್ರಹಿಸಿದರು.

ಡಾಕ್ಟರೇಟ್ ಪಡೆದ ಕಾರಣಕ್ಕೆ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಚ್.ಎಸ್. ಶೆಟ್ಟಿ, ಪತ್ರಕರ್ತರು ಸತ್ಯವನ್ನು ಹೇಳುವ, ಬರೆಯುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ಪತ್ರಕರ್ತನಾಗುವುದು ಮುಖ್ಯವಲ್ಲ, ಬದಲಾಗಿ ಯಾವ ರೀತಿಯ ಪತ್ರಕರ್ತನಾಗಬೇಕೆಂಬುದನ್ನು ನಾವು ನಿರ್ಧರಿಸಬೇಕಿದೆ.

300x250 AD

ಉತ್ತರ ಕನ್ನಡದ ಜೊತೆಗೆ ಕಳೆದ 30 ವರ್ಷಗಳಿಂದ ನಾನು ಒಡನಾಟದಲ್ಲಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದ್ದರೂ ಸಹ ಇಲ್ಲಿ ಪ್ರಬಲ ಇಚ್ಛಾಶಕ್ತಿಯ ನಾಯಕರ ಕೊರತೆ ಎದ್ದು ಕಾಣುತ್ತದೆ. ಹಿಡಿದ ಕೆಲಸ ಹಠದಿಂದ ಪೂರ್ಣಗೊಳಿಸುವ ಹರಿಪ್ರಕಾಶ ಕೋಣೆಮನೆಯಂತವರು ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವಂತಾಗಬೇಕು. ಆ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ವಿಶ್ವದರ್ಶನ ಎಜ್ಯುಕೇಶನ್ ಸೊಸೈಟಿ ಇದರ ಅಧ್ಯಕ್ಷ, ವಿಸ್ತಾರ ಮೀಡಿಯಾದ ಸಿಇಓ ಹರಿಪ್ರಕಾಶ ಕೋಣೆಮನೆ ಪ್ರಸ್ತಾವಿಕ ಮಾತುಗಳನ್ನಾಡಿ, ವಿಶ್ವದರ್ಶನದ ಉದ್ದೇಶ ರ‌್ಯಾಂಕ್ ಗಳಿಕೆ, ಪ್ರಮಾಣ ಪತ್ರ ಪಡೆಯವುದು ಮಾತ್ರವಲ್ಲ, ಜೊತೆಗೆ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಗುರಿ ನಮ್ಮದಾಗಿದೆ. ಶೈಕ್ಷಣಿಕವಾಗಿ ಜಿಲ್ಲೆಯನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ವಿಶ್ವದರ್ಶನ ಮುಂದಿನ ದಿನದಲ್ಲಿ ಕೆಲಸ ಮಾಡಲಿದೆ ಎಂದರು.

ಧಾರವಾಡ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ ಮಾತನಾಡಿ ಶಿಕ್ಷಣ ಸಂಸ್ಥೆಗೆ ಶುಭವನ್ನು ಕೋರಿದರು. ಮೀಡಿಯಾ ಸ್ಕೂಲ್ ನ ಪ್ರಾಂಶುಪಾಲರಾದ ನಾಗರಾಜ ಇಳೆಗುಂಡಿ ಸ್ಕೂಲ್ ನ ಧ್ಯೇಯೋದ್ಧೇಶಗಳನ್ನು ಸವಿಸ್ತಾರವಾಗಿ ಹೇಳಿದರು. ವಿಶ್ವದರ್ಶನ ಸಂಸ್ಥೆ ನಿರ್ದೇಶಕ ನರಸಿಂಹ ಕೋಣೆಮನೆ ವಂದಿಸಿದರು. ಕೊನೆಯಲ್ಲಿ ವಂದೇ ಮಾತರಂ ಮೂಲಕ ಸಭಾ ಕಾರ್ಯಕ್ರಮ ಅಂತ್ಯಗೊಂಡಿತು.

Share This
300x250 AD
300x250 AD
300x250 AD
Back to top