ಕಾರವಾರ: ಗರ್ಭಿಣಿ ತಾಯಂದಿರನ್ನು ಕಾಳಜಿಪೂರ್ವಕವಾಗಿ ನೋಡಿಕೊಳ್ಳುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗರ್ಭಿಣಿ ತಾಯಂದಿರಿಗೆ ಸೀಮಂತ ಕಾರ್ಯಕ್ರಮ ಮಾಡಲಾಗುತ್ತಿದ್ದು, ಗರ್ಭಿಣಿ ತಾಯಂದಿರು ತಮ್ಮ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನೂತನವಾಗಿ ಆಯ್ಕೆಯಾದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಕಿಯರಿಗೆ ತರಬೇತಿ ಕಾರ್ಯಗಾರ ಮತ್ತು ಪೌಷ್ಟಿಕ ಆಹಾರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗರ್ಭಿಣಿಯರನ್ನು ಕಾಳಜಿಯಿಂದ ನೋಡಿಕೊಳ್ಳುವ ನಿಟ್ಟಿನಲ್ಲಿ ಸಿಮಂತ ನಡೆಸಲಾಗುತ್ತಿದ್ದು, ಮಗು ಹುಟ್ಟಿದ ಆರು ತಿಂಗಳ ನಂತರ ಮಗುವಿಗೆವ್ತಾಯಿ ಮಗುವಿಗೆ ಹಾಲು ಜೊತೆಗೆ ಮಗುವಿಗೆ ಪೌಷ್ಠಿಕ ಆಹಾರ ನೀಡಬೇಕಾಗಿದೆ. ಮಗುವಿನ ಮೊದಲ ಆಹಾರ ಸೇವನೆಯನ್ನು ಸೂಚಿಸುವ ಅನ್ನಪ್ರಾಶನ ಮಾಡುವುದರ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕರ್ತವ್ಯಗಳ ಬಗ್ಗೆ ನೂತನವಾಗಿ ಆಯ್ಕೆಯಾದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ತಿಳಿಸಲಾಗಿದೆ ಎಂದರು.
6 ತಿಂಗಳವರೆಗೆ ಕೇವಲ ತಾಯಿ ಎದೆ ಹಾಲುಣಿಸುವುದು, ಹೆರಿಗೆಯಾದ ಒಂದು ಗಂಟೆಯೊಳಗೆ ಎದೆ ಹಾಲುಣಿಸುವುದು ಹಾಗೂ ಅತಿ ಸಣ್ಣಮಕ್ಕಳಿಗೆ ಉಣಿಸುವ ಅಭ್ಯಾಸಗಳನ್ನು ಬೆಳಸಿಕೊಳ್ಳುವ ಬಗ್ಗೆ ಮಹಿಳೆಯರನ್ನು ಪ್ರೋತ್ಸಾಹಿಸುವುದು ಹಾಗೂ ಗರ್ಭಿಣಿಯರಿಗೆ ಬಾಣಂತಿಯರಿಗೆ ಆರೋಗ್ಯ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಲು ನಗದು ರೂಪದಲ್ಲಿ ಪ್ರೋತ್ಸಾಹಧನ ನೀಡುವುದು. ಮೊದಲನೆ ಕಂತಿನಲ್ಲಿ ರೂ.1000 ಗಳನ್ನು ಗರ್ಭಿಣಿಯಾದ ನಂತರದ ತಿಂಗಳಲ್ಲಿ, ಎರಡನೇ ಕಂತಿನ ರೂ.2000ಗಳನ್ನು ಗರ್ಭಿಣಿಯಾಗಿ 6 ತಿಂಗಳ ನಂತರ ನೀಡಲಾಗುವುದು. ಮೂರನೇ ಕಂತಿನ ರೂ.2000ಗಳನ್ನು ಮಗು ಮೊದಲನೇ ಹಂತದ ಚುಚ್ಚುಮದ್ದು ಪಡೆದ ನಂತರ ಒಟ್ಟು 3 ಕಂತುಗಳಲ್ಲಿ ರೂ.5000ಗಳ ಹೆರಿಗೆ ಭತ್ಯೆಯನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿ ಖಾತೆಗೆ ಹಾಕಲಾಗುವುದು ಎಂದರು.
ಜಿಲ್ಲೆಯಲ್ಲಿ ತಾಯಿ- ಮಗು ಮರಣ ಪ್ರಮಾಣ ಕಡಿಮೆ ಮಾಡಲು ಪ್ರತಿಯೊಬ್ಬರು ಶ್ರಮಿಸಿ, ಗರ್ಭಿಣಿಯರು ಕಡ್ಡಾಯವಾಗಿ ಆಸ್ಪತ್ರೇಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳಲು ಅವರಿಗೆ ಅರಿವು ಮೂಡಿಸಬೇಕು. ಮೊದಲ ಹೆಣ್ಣು ಮಗು ಜನಸಿದರೆ ಆ ಮಗುವಿಗೆ ಭಾಗ್ಯಲಕ್ಷ್ಮಿ ಬಾಂಡ್ ಹಾಗೂ ಎರಡು ಬಾರಿ ಹೆಣ್ಣು ಮಗು ಜನಿಸಿದರೆ ಸುಕನ್ಯ ಸಮೃದ್ಧಿ ಬಾಂಡ್ ನೀಡಲಾಗುತ್ತದೆ. ಅಂಗನವಾಡಿಗೆ ಬರುವ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವ ಸಂದರ್ಭದಲ್ಲಿ ಅಭಿನಯದ ಮೂಲಕ ಶಿಕ್ಷಣ ನೀಡಿದಲ್ಲಿ ಅವರ ಗ್ರಹಿಕಾ ಸಾಮರ್ಥ್ಯ ವೃದ್ಧಿಸಿ, ಭವಿಷ್ಯದ ಕಲಿಕೆಗೆ ಸಹಕಾರಿಯಾಗುತ್ತದೆ ಎಂದರು.
ಅಂಗನವಾಡಿಯಲ್ಲಿ ಮಕ್ಕಳನ್ನು ಮನೆಯ ಮಕ್ಕಳು ಎಂಬ ಮನೋಭಾವದಿಂದ ಕಾಳಜಿಯಿಂದ ನೋಡಿಕೊಳ್ಳಬೇಕು. ಪ್ರತಿ ತಿಂಗಳು ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ನೂತನವಾಗಿ ನೇಮಕಗೊಂಡ ಅಂಗನವಾಡಿ ಕಾರ್ಯಕರ್ತೆಯರಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಎಚ್.ಎಚ್.ಕುಕನೂರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿದೇವಿ ನೂತನವಾಗಿ ಆಯ್ಕೆಯಾದ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ತಮ್ಮ ಕರ್ತವ್ಯಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ನೂತನವಾಗಿ ಆಯ್ಕೆಯಾದ 105 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ನೇಮಕಾತಿ ಆದೇಶ ಪ್ರತಿಯನ್ನು ಜಿಲ್ಲಾಧಿಕಾರಿ ವಿತರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ವಿರೂಪಾಕ್ಷ ಪಾಟೀಲ, ಹಳಿಯಾಳ ತಾಲೂಕಿನ ಸಹಾಯಕ ಉಪನಿರ್ದೇಶಕಿ ಲಕ್ಷ್ಮೀದೇವಿ ಇದ್ದರು. ತಾಲೂಕು ಸಂಯೋಜಕಿ ಜಯಶ್ರೀ ಪಟಗಾರ ನಿರೂಪಿಸಿದರು.