Slide
Slide
Slide
previous arrow
next arrow

ಸಭೆಗೆ ಕುಡಿದು ಬಂದ ಸದಸ್ಯನ ವಿರುದ್ಧ ಕ್ರಮಕ್ಕೆ ಮುಂದಾದ ಪುರಸಭೆ ಆಡಳಿತಾಧಿಕಾರಿ!

300x250 AD

ಹಳಿಯಾಳ: ಸಭೆಗೆ ಮದ್ಯ ಸೇವನೆ ಮಾಡಿಬಂದು ಕಿರಿಕಿರಿ ಉಂಟುಮಾಡುತ್ತಿದ್ದ ಪುರಸಭೆ ಸದಸ್ಯನೋರ್ವನ ವಿರುದ್ಧ ಕಠಿಣ ಕ್ರಮಕ್ಕೆ ಪುರಸಭೆ ಆಡಳಿತಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಮುಂದಾಗಿದ್ದಾರೆ.

ಪುರಸಭೆಯ ಸಭಾಂಗಣದಲ್ಲಿ ಆಡಳಿತಾಧಿಕಾರಿ ಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ವಾರ್ಡ್ ಸದಸ್ಯರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸದಸ್ಯನೋರ್ವ ರಂಪಾಟ ಮಾಡತೊಡಗಿದ್ದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದ ಆಡಳಿತಾಧಿಕಾರಿ ಜಯಲಕ್ಷ್ಮಿ ಅವರು ಸಭೆ ಮುಗಿಸಿ ಜಿಲ್ಲಾಧಿಕಾರಿಯವರ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಬೇಕಿದ್ದರಿಂದ ಸಭಾಂಗಣದಲ್ಲೇ ಕುಳಿತಿದ್ದರು. ಅಷ್ಟರಲ್ಲಿ ಉಳಿದೆಲ್ಲ ಸದಸ್ಯರೂ ತೆರಳಿದ್ದರೂ, ರಂಪಾಟ ಮಾಡಿದ್ದ ಸದಸ್ಯ ಮಾತ್ರ ಹೋದವನು ತಿರುಗಿ- ತಿರುಗಿ ಎರಡ್ಮೂರು ಬಾರಿ ಆಡಳಿತಾಧಿಕಾರಿ ಜಯಲಕ್ಷ್ಮೀಯವರಿದ್ದ ಸಭಾಂಗಣಕ್ಕೆ ಬಂದು- ಹೋಗುವುದನ್ನೂ ಮಾಡಿದ್ದಾನೆ.

ಇದರಿಂದ ಸಿಟ್ಟಿಗೆದ್ದ ಆಡಳಿತಾಧಿಕಾರಿ ಜಯಲಕ್ಷ್ಮಿಯವರು ಅಟೆಂಡರ್‌ನ ಕರೆದು, ವಿಡಿಯೋ ಕಾನ್ಫರೆನ್ಸ್ನಲ್ಲಿದ್ದಾಗ ಹೀಗೆ ಯರ‍್ಯಾರೋ ಬರುತ್ತಿದ್ದರೂ ನೀವೇಕೆ ತಡೆಯುತ್ತಿಲ್ಲವೆಂದು ಗದರಿದ್ದಾರೆ. ಬಳಿಕ ಅಟೆಂಡರ್ ಸಭಾಂಗಣದ ಬಾಗಿಲು ಮುಚ್ಚಿ, ಮತ್ತೆ ಆತ ಒಳ ಹೋಗದಂತೆ ತಡೆದಿದ್ದಾನೆ. ಸದಸ್ಯನಿಂದಾಗಿ ಕಿರಿಕಿರಿ ಅನುಭವಿಸಿದ ಆಡಳಿತಾಧಿಕಾರಿ ಜಯಲಕ್ಷ್ಮಿಯವರು ಪೊಲೀಸರನ್ನು ಕರೆದು ಆತನ ವೈದ್ಯಕೀಯ ತಪಾಸಣೆಗೆ ಸೂಚಿಸಿದ್ದಾರೆ. ಆದರೆ ತಾಲೂಕು ಆಸ್ಪತ್ರೆಯಲ್ಲಿ ಆಲ್ಕೋಹಾಲ್ ಟೆಸ್ಟರ್ ಇಲ್ಲದ ಕಾರಣ ವೈದ್ಯರೋರ್ವರು ಮೇಲ್ನೋಟಕ್ಕೆ ಮದ್ಯ ಸೇವನೆ ಮಾಡಿದಂತೆ ವಾಸನೆ ಬರುತ್ತಿದೆ ಎಂದು ವರದಿ ನೀಡಿ ಕಳುಹಿಸಿದ್ದಾರೆ. ಟೆಸ್ಟರ್‌ನಲ್ಲೇ ಅಧಿಕೃತವಾಗಿ ಆಲ್ಕೋಹಾಲ್ ಪ್ರಮಾಣದ ವರದಿ ಪಡೆಯುವಂತೆ ಡಿವೈಎಸ್‌ಪಿಗೆ ಸೂಚಿಸಿದಾಗ ದಾಂಡೇಲಿಯಿಂದ ಟೆಸ್ಟರ್ ತರಿಸಿ ತಪಾಸಣೆಗೊಳಪಡಿಸಿದ್ದು,120 ರೀಡಿಂಗ್ ಕಾಣಿಸಿದೆ.

‘ಪುರಸಭಾ ಕಾಯ್ದೆ 1964ರ ಕಲಂ 79ರ ಪ್ರಕಾರ ಪ್ರತಿ ಸದಸ್ಯನೂ ಸರ್ಕಾರಿ ನೌಕರನೆಂದು ಪರಿಗಣಿಸಲ್ಪಡುತ್ತಾನೆ. ಹೀಗಾಗಿ ಸಭೆಗಳಲ್ಲಿ ಮದ್ಯ ಸೇವನೆ ಮಾಡಿ ಹಾಜರಿರುವುದು ಅಪರಾಧವಾಗಿದೆ. ಒಂದುವೇಳೆ ಹೀಗೆ ಮಾಡಿದ್ದಲ್ಲಿ ಆತನ ಸದಸ್ಯತ್ವ ರದ್ದು ಮಾಡಲೂ ಅವಕಾಶ ಇದೆ. ಹೀಗೆ ಅಧಿಕಾರಿಗಳೊಂದಿಗೆ ಮದ್ಯದ ಅಮಲಲ್ಲಿ ವರ್ತಿಸುವವರು ವಾರ್ಡ್ ಸದಸ್ಯರೊಂದಿಗೆ ಹೇಗೆ ನಡೆದುಕೊಳ್ಳಬಲ್ಲರು. ಇದೊಂದು ಪ್ರಕರಣ ಎಲ್ಲರಿಗೂ ಪಾಠವಾಗಬೇಕಿದೆ. ಹೀಗಾಗಿ ಸದಸ್ಯನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇನೆ’ ಎಂದು ಆಡಳಿತಾಧಿಕಾರಿ ಜಯಲಕ್ಷ್ಮಿ ತಿಳಿಸಿದ್ದಾರೆ.

300x250 AD

ಮಹಿಳಾ ಅಧಿಕಾರಿಗಳಿಗೆ ಪೀಡನೆ:

ಇನ್ನೋರ್ವ ಪುರಸಭಾ ಸದಸ್ಯ ಕೂಡ ಹೀಗೆ ಕುಡಿದು ಬಂದು ಮಹಿಳಾ ಅಧಿಕಾರಿಗಳನ್ನೆಲ್ಲ ಚೇಂಬರ್‌ಗೆ ಕರೆಯುವುದು ಇದೆಯಂತೆ. ಅಲ್ಲದೇ ಜಿಲ್ಲೆಯ ಅನೇಕ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲೂ ಕುಡಿದು ಬಂದು ಕೆಲವರು ಆರೋಗ್ಯಕರ ಚರ್ಚೆಗಳ ಹಾದಿ ತಪ್ಪಿಸುವುದೂ ಉಂಟು. ಹೀಗಾಗಿ ಉಪವಿಭಾಗಾಧಿಕಾರಿಯವರ ಈ ಕಠಿಣ ಕ್ರಮ ನಿಜಕ್ಕೂ ಎಲ್ಲಾ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೂ ಪಾಠವಾಗಬಲ್ಲದು.

Share This
300x250 AD
300x250 AD
300x250 AD
Back to top