ಶಿರಸಿ: ಹಿಂದೂಗಳೆಲ್ಲರೂ ಒಂದಾಗಿ ದೇಶ ಕಟ್ಟುವ ಹಾಗೂ ನಮ್ಮ ಸನಾತನ ಸಂಸ್ಕ್ರತಿ ಉಳಿಸುವ ದೃಢ ಸಂಕಲ್ಪ ಮಾಡಬೇಕು. ಅಂದಾಗ ಮಾತ್ರ ಭಾರತವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ನುಡಿದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳ ಶಿರಸಿ ವಿಭಾಗದ ವತಿಯಿಂದ ಗುರುವಾರ ನಗರದ ವಿಕಾಸ ಆಶ್ರಮದ ಮೈದಾನದಲ್ಲಿ ಆಯೋಜಿಸಿದ ಶೌರ್ಯ ಜಾಗರಣಾ ರಥಯಾತ್ರೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಆಶೀರ್ವಚನ ನೀಡಿದರು. ನಮ್ಮ ಸಹಾನುಭೂತಿಯ ಮಾತುಗಳೇ ನಮಗೆ ಮುಳುವಾಗುತ್ತಿದೆ. ಯಾವುದು ಶಾಶ್ವತವೋ, ಯಾವುದು ಅಜರಾಮರವೋ ಅದೇ ಹಿಂದೂ ಧರ್ಮ. ಒಡೆದು ಆಳುವ ವ್ಯಕ್ತಿಗಳಿಂದ ಜಾತಿ ವ್ಯವಸ್ಥೆ ಬಂದಿದ್ದು, ಜಾತಿ ಮರೆತು ಹಿಂದೂಗಳೆಲ್ಲರೂ ಒಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ. ರಾಮ ಕಾರ್ಯ ಮಾಡುವ ಕಾಲ ಸನಿಹವಾಗಿದ್ದು, ನಮ್ಮಲ್ಲಿನ ಜಡತ್ವ ಹೊಗಲಾಡಿಸಿ ನಾವೆಲ್ಲರೂ ಒಂದಾದಾಗ ಮಾತ್ರ ದೇಶಕಟ್ಟಲು ಸಾಧ್ಯ. ಹಿಂದೂ ಧರ್ಮದ ಸಂಸ್ಕಾರ, ಸಂಸ್ಕೃತಿಯಲ್ಲಿ ಅಡ್ಡ ನಡೆ ಶುರುವಾಗುತ್ತಿದ್ದು, ಧರ್ಮದ ಕುರಿತು ಜಾಗೃತರಾಗಬೇಕಿದೆ. ಈ ಕುರಿತು ಮಸ್ತಕ ವಿಕಸಿಸುವ ಕೆಲಸವಾಗಬೇಕು ಎಂದರು.
ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಉತ್ತರ ಪ್ರಾಂತದ ಉಪಾಧ್ಯಕ್ಷ ಗಂಗಾಧರ ಹೆಗಡೆ ಮಾತನಾಡಿ, ಹಿಂದೂ ಧರ್ಮದ ದುರ್ಬಲತೆಯಿಂದ ಮತಾಂತರ ಮೀತಿ ಮೀರಿ ನಡೆಯುತ್ತಿದ್ದು, ಈ ಬಗ್ಗೆ ಹಿಂದೂ ಯುವ ಸಮೂಹ ಜಾಗೃತಗೊಳ್ಳಬೇಕಿದೆ. ಅಲ್ಲದೇ, ಲವ್ ಜಿಹಾದ್ ಸದೆಬಡಿಯಲು ನಾವೆಲ್ಲರೂ ಸಜ್ಜಾಗಬೇಕಿದ್ದು, ಸತ್ಯ, ಹಿಂದೂತ್ವದ ಭಾವನೆ ಸಮಾಜದಲ್ಲಿ ಜಾಗೃತಿಗೊಳ್ಳಬೇಕು. ಸಮಾಜದಲ್ಲಿ ಜಾತಿಯ ಕಂದಕಗಳು ಹೆಚ್ಚಾಗುತ್ತಿದ್ದು, ಇದನ್ನು ಹೋಗಲಾಡಿಸಿ ಹಿಂದೂ ಎಂಬ ಭಾವನೆ ನಮ್ಮಲ್ಲಿ ಮೂಡಬೇಕಿದೆ. ಪ್ರಪಂಚದ ಏಕೈಕ ಸಂಸ್ಕ್ರತಿ ಹಿಂದೂ ಸಂಸ್ಕ್ರತಿ. ನಮ್ಮ ಪೂರ್ವಜರ ಪರಾಕ್ರಮದಿಂದ ಹಿಂದೂ ಸಮಾಜ ಇಂದಿಗೂ ಉಳಿದಿದ್ದು, ಯುವ ಸಮೂಹ ಇದನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಶ್ರಮಿಸಬೇಕಿದೆ. ದೇಶದ ರಕ್ಷಣೆಗೆ ಭಜರಂಗದಳವು ಟೊಂಕ ಕಟ್ಟಿ ನಿಂತಿದ್ದು, ಯುವಕರಿಗೆ ತ್ಯಾಗ, ಪರಾಕ್ರಮದ ಇತಿಹಾಸ ತಿಳಿಸುವ ಕಾರ್ಯವಾಗಬೇಕಿದೆ. ಅಲ್ಲದೇ, ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಬಗ್ಗೆ ಕ್ರಮವಹಿಸಬೇಕು ಎಂದ ಅವರು, ಮಹಿಷಾ ದಸರಾ ನಡೆಸಲು ವಿಶ್ವ ಹಿಂದೂ ಪರಿಷತ್ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಶಿರಸಿಗೆ ಆಗಮಿಸಿದ ಶೌರ್ಯ ಜಾಗರಣಾ ರಥ ಯಾತ್ರೆಗೆ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಪೂರ್ಣಕುಂಭದ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ಮಾರಿಗುಡಿಯ ಅರ್ಚಕರು ಭಜರಂಗಿ ಮೂರ್ತಿಗೆ ಪೂಜೆ ಸಲ್ಲಿಸಿದರು. ಚಿಕ್ಕ ಮಕ್ಕಳಿಂದ ನೃತ್ಯ ಸೇವೆ ನಡೆಯಿತು. ನಂತರ ರಥ ಹಾಗೂ ಬೈಕ್ ರ್ಯಾಲಿಯು ಮಾರಿಕಾಂಬಾ ದೇವಸ್ಥಾನದಿಂದ ಹೊರಟು ಶಿವಾಜಿ ಚೌಕ, ಸಿಪಿ ಬಜಾರ, ಸಿಂಪಿಗಲ್ಲಿ, ಸದ್ದಾನಂದ ಗಲ್ಲಿ, ದೇವಿಕೇರಿ, ಅಶ್ವಿನಿ ಸರ್ಕಲ್ ಮಾಗರ್ವಾಗಿ ಸಂಚರಿಸಿ, ವಿಕಾಸ ಆಶ್ರಮದ ಮೈದಾನದಲ್ಲಿ ಸಂಪನ್ನಗೊಂಡಿತು. ಶೌರ್ಯ ಜಾಗರಣಾ ರಥಯಾತ್ರೆಯ ಸ್ವಾಗತ ಸಮಿತಿ ಉಪಾಧ್ಯಕ್ಷ ಪ್ರಕಾಶ ಸಾಲೇರ ಸ್ವಾಗತಿಸಿದರು. ಜಿಲ್ಲಾ ಬಜರಂಗದಳದ ಸಂಯೋಜಕ ಅಮಿತ್ ಶೇಟ್ ವಂದಿಸಿದರು.
ಈ ವೇಳೆ ವಿಧಾನಸಭಾ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವೇದಿಕೆಯಲ್ಲಿ ವಿ.ಹಿಂ.ಪ ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ, ಜಿಲ್ಲಾ ಉಪಾಧ್ಯಕ್ಷ ಕೇಶವ ಮರಾಠೆ ಮಂಜಗುಣಿ, ಜಿಲ್ಲಾ ಕಾರ್ಯದರ್ಶಿ ಗಣಪತಿ ಭಟ್ಟ ಹರಿಮನೆ ಇದ್ದರು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೂರಾರು ಪೊಲೀಸರು ಬಿಗಿ ಬಂದೋಬಸ್ತ್ ಆಯೋಜಿಸಿದ್ದರು.