ಭಟ್ಕಳ: ತಾಲೂಕಿನಾದ್ಯಂತ ಹಳೆ ಮತ್ತು ದುರಸ್ತಿ ಮನೆ ಕಟ್ಟುವ ಪ್ರಕರಣಗಳ ಅರಣ್ಯ ಅತಿಕ್ರಮಣದಾರರನ್ನು ಆರೋಪಿ ಎಂದು ಗುರುತಿಸಿ, ಅಂತಹ ಅರಣ್ಯ ಅತಿಕ್ರಮಣದಾರರ ಮೇಲೆ ಕ್ರೀಮಿನಲ್ ಪ್ರಕರಣ ದಾಖಲಿಸಲು ನಿರ್ದೇಶನ ನೀಡಿದ ಭಟ್ಕಳ ವಲಯ ಅರಣ್ಯಾಧಿಕಾರಿಗಳ ಕ್ರಮ ಖಂಡನಾರ್ಹ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಖಂಡಿಸಿದ್ದಾರೆ.
ತಾಲೂಕಾದ್ಯಂತ ಹಳೆ ಮನೆ, ದುರಸ್ಥಿ ಪ್ರಕರಣಗಳ ಅರ್ಜಿದಾರರನ್ನು ಹಾಗೂ ಅರಣ್ಯ ಪ್ರದೇಶದಲ್ಲಿ ಮಾಡಲ್ಪಡುವ ಅನಧೀಕೃತ ಹೊಸ ಅತಿಕ್ರಮಣ ಪ್ರಕರಣಗಳು ಮತ್ತು ಈ ಹಿಂದೆ ಮಾಡಿರುವ ಅತಿಕ್ರಮಣ ಜಾಗದಲ್ಲಿ ಹೊಸದಾಗಿ ಕಟ್ಟಡ ಕಟ್ಟುವ (ದುರಸ್ಥಿ ಕಾರ್ಯವೂ ಸೇರಿದಂತೆ) ಪ್ರಕರಣಗಳ ಅತಿಕ್ರಮಣದಾರರನ್ನು ಆರೋಪಿ ಎಂದು ಗುರುತಿಸಿ ವಲಯ ಅರಣ್ಯ ಅಧಿಕಾರಿಗಳ ಮುಂದೆ ಹಾಜರಪಡಿಸಲು ನಿರ್ದೇಶನ ನೀಡಿರುವುದು ಖೇದಕರ.
ಇಂತಹ ಪ್ರಕರಣಗಳ ಅತಿಕ್ರಮಣದಾರರ ಮೇಲೆ ಕಾನೂನು ಕ್ರಮವಾಗಿ ಪ್ರಥಮ ವರ್ತಮಾನ ವರದಿ ದಾಖಲಿಸಲು ಅವಶ್ಯವಿರುವ ದಾಖಲೆಗಳನ್ನು ಸಲ್ಲಿಸಲು ಅಧೀನ ಸಿಬ್ಬಂದಿಗಳಿಗೆ ಇತ್ತೀಚಿಗೆ ಲಿಖಿತ ನಿರ್ದೇಶನ ನೀಡಿರುವುದು ವಿಷಾದಕರ ಸಂಗತಿ ಎಂದರು.
ಉಸ್ತುವಾರಿ ಸಚಿವರ ಗಮನಕ್ಕೆ:
ಭಟ್ಕಳ ತಾಲೂಕಿನ ವಲಯ ಅರಣ್ಯಾಧಿಕಾರಿ, ಕಾನೂನು ಮತ್ತು ಸರಕಾರದ ನೀತಿಗೆ ವಿರುದ್ಧವಾಗಿರುವ ವರ್ತನೆಯನ್ನು, ಉಸ್ತುವಾರಿ ಸಚಿವ ಮಂಕಾಳ ವೈಧ್ಯ ಅವರ ಗಮನಕ್ಕೆ ತರಲಾಗುವುದು. ಅಲ್ಲದೇ, ಕಾನೂನಿಗೆ ವ್ಯತಿರಿಕ್ತವಾಗಿ ಕಾನೂನು ಬದ್ಧ ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ ಅತಿಕ್ರಮಣದಾರರ ಜೀವನ ಅವಶ್ಯ ಚಟುವಟಿಕೆ ಜರುಗಿಸಲು ಆತಂಕ ಉಂಟು ಮಾಡುತ್ತಿರುವುದನ್ನು ಸಚಿವರ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.