ಕಾರವಾರ: ಜಿಲ್ಲೆಯಲ್ಲಿ ಓಸಿ ಮಟ್ಕಾ ದಂಧೆ ಕೆಲ ದಿನಗಳಿಂದ ಎಗ್ಗಿಲ್ಲದೇ ನಡೆಯುತ್ತಿದೆ. ಇನ್ನು ಓಸಿ ಮತ್ತು ಮಟ್ಕಾ ದಂಧೆ ಹೆಚ್ಚಾಗುತ್ತಿದ್ದರೂ ಇದನ್ನ ಕಡಿವಾಣ ಹಾಕಬೇಕಾಗಿರುವ ಪೊಲೀಸರು ಮಾತ್ರ ಆಗೊಂದು ಈಗೊಂದು ಪ್ರಕರಣ ದಾಖಲಿಸಿ ಜಾಣ ಮೌನಕ್ಕೆ ಜಾರಿದ್ದು ಇವರ ನಡೆ ಅನುಮಾನಕ್ಕೆ ಕಾರಣವಾಗಿದೆ.
ಓಸಿ ಹಾಗೂ ಮಟ್ಕಾ ದಂದೆಯಿಂದ ಸಾರ್ಜನಿಕರು ತಮ್ಮ ಜೀವನವನ್ನೇ ಹಾಳುಮಾಡಿಕೊಂಡ ಹಲವು ಘಟನೆಗಳಿದೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಡವರೇ ಹೆಚ್ಚಿದ್ದು ಓಸಿ ಮತ್ತು ಮಟ್ಕಾ ದಂಧೆಗೆ ಬಲಿಯಾದವರು ಬಡವರೇ ಆಗಿದ್ದಾರೆ. ಕೂಲಿ ಕೆಲಸ ಮಾಡುವ, ಮೀನು ಮಾರಾಟ ಮಾಡುವ, ಅಂಗಡಿಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡುವವರೇ ಈ ದಂಧೆಗೆ ಬಲಿಯಾಗಿದ್ದಾರೆ.
ಪ್ರತಿದಿನ ದುಡಿದ ಒಂದು ಭಾಗವನ್ನು ಕನಸ್ಸಿನಲ್ಲಿ ಬಂದ ನಂಬರ್, ಅಚ್ಚರಿಯ ನಂಬರ್, ಹೀಗೆ ನಾನಾ ಕಾರಣದಿಂದ ನಂಬರ್‌ಗಳನ್ನ ಜೋಡಿಸಿ ಓಸಿ ಮಟ್ಕಾಕ್ಕೆ ದುಡ್ಡನ್ನು ಹಾಕುತ್ತಿದ್ದು ಜೂಜಿನ ಆಟಕ್ಕೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಯಾವಾಗಲೋ ಒಮ್ಮೆ ಬಂದ ಹಣದಿಂದ ತೃಪ್ತರಾಗಿ ಇನ್ನು ಹೆಚ್ಚಿನ ಹಣ ಬರಬೇಕು ಎಂದು ದುಡಿದ ಹಣವನ್ನು ವ್ಯಯ ಮಾಡುತ್ತಲೇ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಓಸಿ ಮಟ್ಕಾ ಹಿಂದಿನಿಂದ ನಡೆಯುತ್ತಿದ್ದು ಅದರಲ್ಲೂ ಅಂಕೋಲಾ, ಶಿರಸಿ, ಮುಂಡಗೋಡ, ಹಳಿಯಾಳ, ಕಾರವಾರ, ಯಲ್ಲಾಪುರ, ಹೊನ್ನಾವರ, ಭಟ್ಕಳ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದು ಕಳೆದ ಬಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಡಾ.ಸುಮನ್ ಪೆನ್ನೇಕರ್ ಈ ದಂಧೆಗೆ ಕಡಿವಾಣ ಹಾಕಿದ್ದರು.
ಇನ್ನು ಚುನಾವಣೆ ವೇಳೆಯೂ ದಂಧೆ ನಡೆದರೂ ದೊಡ್ಡ ಮಟ್ಟದಲ್ಲಿ ವಿಸ್ತರಣೆ ಆಗಿರಲಿಲ್ಲ. ಸದ್ಯ ಚುನಾವಣೆ ಮುಗಿದು ಹೊಸ ಸರ್ಕಾರ ಬಂದ ನಂತರ ದೊಡ್ಡ ಮಟ್ಟದಲ್ಲಿಯೇ ಜಿಲ್ಲೆಯಲ್ಲಿ ಓಸಿ ಮಟ್ಕಾ ದಂಧೆ ಹೆಚ್ಚಾಗಿದೆ. ಪೊಲೀಸರು ಮೌನವಾಗಿರುವುದು ದಂಧೆಕೋರರಿಗೆ ಹಬ್ಬವಾದಂತಾಗಿದ್ದು ರಾಜಾರೋಷವಾಗಿ ತಮ್ಮ ದಂಧೆಯನ್ನ ವಿಸ್ತರಿಸಲು ಮುಂದಾಗಿದ್ದಾರೆ.
ವರ್ಗಾವಣೆಯ ನಂತರ ಜೋರಾದ ದಂಧೆ:
ಜಿಲ್ಲೆಯ ಠಾಣೆಗಳಿಗೆ ಪಿ.ಐ ಹಾಗೂ ಪಿಎಸ್‌ಐಗಳ ವರ್ಗಾವಣೆಯಾಗಿ ಬಹುತೇಕ ಎಲ್ಲಾ ಕಡೆ ಅಧಿಕಾರಿಗಳು ಚಾರ್ಜ್ ತೆಗೆದುಕೊಂಡು ಕೆಲಸ ಪ್ರಾರಂಭಿಸಿದ್ದಾರೆ.
ಅಧಿಕಾರಿಗಳ ವರ್ಗಾವಣೆಯ ಹಿಂದೆ ದೊಡ್ಡ ಮಟ್ಟದಲ್ಲಿಯೇ ಹಣದ ವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಠಾಣೆಗಳಿಗೆ ಪೊಸ್ಟಿಂಗ್ ಪಡೆಯಲು ಲಕ್ಷ ಲಕ್ಷ ಹಣ ಕೊಟ್ಟು ಪೊಸ್ಟಿಂಗ್ ಪಡೆದಿದ್ದಾರೆ ಎನ್ನಲಾಗಿತ್ತು. ಕಾರವಾರ ತಾಲೂಕಿನ ಗಡಿ ಭಾಗದ ಪೊಲೀಸ್ ಠಾಣೆಗೆ ಪೋಸ್ಟಿಂಗ್ ಪಡೆಯಲು 20 ಲಕ್ಷಕ್ಕೂ ಅಧಿಕ ಹಣ ನೀಡಿದ್ದಾರೆ ಎನ್ನುವ ವಿಚಾರ ಸಾಕಷ್ಟು ವೈರಲ್ ಆಗಿತ್ತು.
ಸದ್ಯ ಠಾಣೆಗಳಿಗೆ ಪೊಸ್ಟಿಂಗ್ ಪಡೆದವರು ತಮ್ಮ ಜವಬ್ದಾರಿ ವಹಿಸಿಕೊಂಡು ಕೆಲಸ ಪ್ರಾರಂಭಿಸಿದ್ದಾರೆ. ಈ ವರ್ಗಾವಣೆಯ ನಂತರವೇ ಬಹುತೇಕ ಎಲ್ಲಾ ತಾಲೂಕಿನ ಠಾಣೆಗಳ ಲಿಮಿಟ್‌ನಲ್ಲಿ ಓಸಿ ಹಾಗೂ ಮಟ್ಕಾ ದಂಧೆ ಜೋರಾಗಿ ನಡೆಯಲು ಪ್ರಾರಂಭವಾಗಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಕರಾವಳಿ ಭಾಗದ ಠಾಣೆಯೊಂದಕ್ಕೆ ಓಸಿ ಮಟ್ಕಾ ಬುಕ್ಕಿಗಳು ಏಳು ಲಕ್ಷಕ್ಕೂ ಅಧಿಕ ಹಣ ತಿಂಗಳಿಗೆ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು ಓಸಿ ಮಟ್ಕಾ ದಂಧೆಯ ವಿಚಾರದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಡಿಜಿಟಲ್ ವ್ಯವಹಾರ:
ಈ ಹಿಂದೆ ಓಸಿ ಮಟ್ಕಾ ನಂಬರ್‌ಗಳನ್ನು ಚೀಟಿಯಲ್ಲಿ ಬರೆದುಕೊಳ್ಳುತ್ತಿದ್ದರು. ಆದರೆ ಸದ್ಯ ಅಂಗಡಿಗಳಲ್ಲಿ ಮೊಬೈಲ್‌ನಲ್ಲಿಯೇ ಟೈಪ್ ಮಾಡಿಕೊಳ್ಳುತ್ತಿದ್ದು ಡಿಜಿಟಲ್ ವ್ಯವಹಾರದಿಂದ ಆರೋಪಿಯನ್ನು ಪತ್ತೆ ಹಚ್ಚುವುಷ್ಟು ಕಷ್ಟ ಎನ್ನಲಾಗುತ್ತಿದೆ.
ಶೇಕಡಾ 80ಕ್ಕೂ ಅಧಿಕ ಬುಕ್ಕಿಗಳು ಡಿಜಿಟಲ್ ವ್ಯವಹಾರ ಪ್ರಾರಂಭಿಸಿದ್ದು ಪ್ರತಿ ದಿನ ಇಡೀ ಜಿಲ್ಲೆಯಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಹಣದ ವ್ಯವಹಾರ ಓಸಿ ಹಾಗೂ ಮಟ್ಕಾ ಆಟದಲ್ಲಿ ನಡೆಯುತ್ತಿದೆ ಎನ್ನಲಾಗಿದ್ದು, ಜಿಲ್ಲಾ ಪೊಲೀಸ್ ಅಧಿಕಾರಿಗಳು, ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ReplyForward