ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ಷರಶಃ ದ್ವೇಷ ರಾಜಕಾರಣಕ್ಕೆ ಇಳಿದಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಈಗಾಗಲೇ ಗ್ಯಾರಂಟಿ ಯೋಜನೆ ಜಾರಿ ಮಾಡಿ ಆರ್ಥಿಕ ಸಮತೋಲನಕ್ಕೆ ಹೆಣಗಾಡುತ್ತಿರುವ ಸರ್ಕಾರ ಈಗ ಬಿಜೆಪಿ ಶಾಸಕರ ಕ್ಷೇತ್ರಗಳ ಅನುದಾನಕ್ಕೆ ಕೈ ಹಾಕಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನೀಡಿದ್ದ ಕೋಟ್ಯಾಂತರ ರೂಪಾಯಿ ಅನುದಾನವನ್ನು ವಾಪಸ್ ಪಡೆದಿರುವ ಸರ್ಕಾರ ತಮ್ಮದೇ ಪಕ್ಷದ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ವರ್ಗಾಯಿಸಿದೆ. ಇದೀಗ ರಾಜ್ಯ ರಾಜಕೀಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಇದೇ ವೇಳೆ ಆರ್. ಆರ್. ನಗರ ಶಾಸಕ ಮುನಿರತ್ನ ಮೇಲೆ ಡಿ.ಕೆ. ಬ್ರದರ್ಸ್ ಮುಗಿಬಿದ್ದಿದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ನೀಡುವ ಮಹತ್ತರ ಆದೇಶವೊಂದು ರಾಜ್ಯ ಸರ್ಕಾರದಿಂದ ಹೊರಬಿದ್ದಿದೆ. ರಾಜರಾಜೇಶ್ವರಿ ಕ್ಷೇತ್ರಕ್ಕೆ ಹಂಚಿಕೆಯಾಗಿದ್ದ ದೊಡ್ಡ ಪ್ರಮಾಣದ ಅನುದಾನವನ್ನು ವಾಪಸ್ ಪಡೆಯಲಾಗಿದೆ. ಅಲ್ಲದೆ, ಆರ್. ಆರ್ ನಗರ ಸೇರಿದಂತೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕಳೆದ ಅವಧಿಯಲ್ಲಿ ನೀಡಲಾಗಿದ್ದ ಅನುದಾನವನ್ನು ವಾಪಸ್ ಪಡೆದು 11 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಇಲ್ಲಿ ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ಇವರಲ್ಲಿ ಬಿಜೆಪಿಯ ಶಾಸಕರೊಬ್ಬರ ಕ್ಷೇತ್ರವೂ ಸೇರಿದೆ. ಅಂದರೆ, ಯಶವಂತಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅವರ ಕ್ಷೇತ್ರಕ್ಕೂ ಅನುದಾನವನ್ನು ನೀಡಲಾಗಿದೆ.
ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ 485 ಕೋಟಿ ರೂಪಾಯಿಗಳ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಈಗ ವಾಪಸ್ ಪಡೆದಿದೆ. ವಾಪಸ್ ಪಡೆದು 11 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಇದು ಈಗ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
126 ಕೋಟಿ ರೂ. ವಾಪಸ್:
ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಅವರ ಯಶವಂತಪುರ ಕ್ಷೇತ್ರಕ್ಕೂ 40 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದರೆ, ಆರ್ ಆರ್ ನಗರಕ್ಕೆ ಬಿಜೆಪಿ ಸರ್ಕಾರ ನೀಡಿದ್ದ 126 ಕೋಟಿ ರೂಪಾಯಿ ಅನುದಾನವನ್ನು ವಾಪಸ್ ಪಡೆದು ಆದೇಶವನ್ನು ಹೊರಡಿಸಲಾಗಿದೆ. ಆರ್.ಆರ್. ನಗರ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಮಂಜೂರು ಆಗಿದ್ದ ಅನುದಾನ ಅದಾಗಿತ್ತು.
ಅಕ್ಟೋಬರ್ 11ರಂದು ಮುನಿರತ್ನ ಪ್ರತಿಭಟನೆ:
ಆರ್. ಆರ್. ನಗರ ಕ್ಷೇತ್ರದ ಅನುದಾನ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಪಟ್ಟಂತೆ ಆಕ್ರೋಶಗೊಂಡಿರುವ ಶಾಸಕ ಮುನಿರತ್ನ, ಸರ್ಕಾರದ ವಿರುದ್ಧ ಬುಧವಾರ (ಅಕ್ಟೋಬರ್ 11) ಧರಣಿಗೆ ಮುಂದಾಗಿದ್ದಾರೆ. ವಿಕಾಸಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಲಿದ್ದಾರೆ. ಧರಣಿ ನಡೆಸುವ ಮೂಲಕ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ವಿರುದ್ಧ ಆಕ್ರೋಶವನ್ನು ಹೊರಹಾಕಲಿದ್ದಾರೆ.
ಪ್ರತಿಭಟನೆಗೆ ಸಿಗುವುದೇ ಬಿಜೆಪಿ ನಾಯಕರ ಬೆಂಬಲ?
ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಪ್ರತಿಕ್ರಿಯೆ ನೀಡಿ, ಮುನಿರತ್ನ ನಾಯ್ಡು ಅವರ ಕ್ಷೇತ್ರಕ್ಕೆ ಮಂಜೂರಾಗಿದ್ದ ಹಣ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ವರ್ಗಾವಣೆ ಆಗಿದೆ. ಟೆಂಡರ್ ಆಗಿರುವುದನ್ನು ವಾಪಸ್ ಪಡೆದಿರುವುದು ಖಂಡನೀಯ. ಈ ಸರ್ಕಾರ ತಮ್ಮ ಮನೆಯಿಂದ ಹಣ ಕೊಡುತ್ತಿದೆಯೇ? ಕೋಟ್ಯಂತರ ಜನ ಕಟ್ಟುವ ಟ್ಯಾಕ್ಸ್ನಿಂದ ಕೊಡುತ್ತಿರುವುದಾಗಿದೆ. ಮುನಿರತ್ನ ಅವರಿಗೆ ಮಾಡುತ್ತಿರುವ ಅನ್ಯಾಯವು ಎಲ್ಲ ಬಿಜೆಪಿ ಶಾಸಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಈ ಸಂಬಂಧ ಮುನಿರತ್ನ ಅವರು ಬುಧವಾರ ನಡೆಸಲಿರುವ ಪ್ರತಿಭಟನೆಗೆ ಬೆಂಬಲ ಇದೆ. ಪಕ್ಷದ ಮುಖಂಡರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ ಎಂದು ಹೇಳಿದ್ದಾರೆ.
ಕೈ ಮುಗಿದು ಕೇಳ್ತೇನೆ, ಅನುದಾನ ವಾಪಸ್ ಕೊಡಿ: ಶಾಸಕ ಮುನಿರತ್ನ
ನಾನು ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರಲ್ಲಿ ಕೈ ಮುಗಿದು ಕೇಳಿಕೊಳ್ಳುತೇನೆ. ದಯಮಾಡಿ ನನ್ನ ಕ್ಷೇತ್ರದ ಅನುದಾನ ವಾಪಸ್ ಕೊಡಿ. ನಮ್ಮ ಪಕ್ಷದ ಶಾಸಕ ಯಶವಂತಪುರಕ್ಕೆ 40 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಬ್ಯಾಟರಾಯನ ಪುರ ಹಾಗೂ ಪುಲಕೇಶಿ ನಗರಕ್ಕೂ ಕೊಟ್ಟಿದ್ದಾರೆ. ಕೆ.ಜಿ ಹಳ್ಳಿ ಡಿ.ಜೆ ಹಳ್ಳಿ ಪ್ರಕರಣವನ್ನು ಮುಚ್ಚಿ ಹಾಕಲು ಕೊಟ್ಟಿದ್ದಾರೆ. ನಮ್ಮ ರಾಜರಾಜೇಶ್ವರಿ ಕ್ಷೇತ್ರದ 40 ಕೋಟಿ ರೂಪಾಯಿಯನ್ನು ಪುಲಕೇಶಿ ನಗರ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಹೀಗಾಗಿ ಇಂದು ಕೈ ಮುಗಿದು ಕೇಳಿಕೊಂಡಿದ್ದೇನೆ. ನಾಳೆ ಅವರ ಕಾಲು ಹಿಡಿದು ಕೇಳುತ್ತೇನೆ. ನನ್ನ ಕ್ಷೇತ್ರದ ಜನರಿಗಾಗಿ ನಾನು ಕಾಲು ಹಿಡಿಯುತ್ತೇನೆ ಎಂದು ಶಾಸಕ ಮುನಿರತ್ನ ಮನವಿ ಮಾಡಿದ್ದಾರೆ.
ಮೊದಲು ಪ್ರತಿಭಟನೆ ಕೂರಲಿ: ಡಿ.ಕೆ. ಶಿವಕುಮಾರ್
ರಾಜರಾಜೇಶ್ವರಿ ನಗರ ಕ್ಷೇತ್ರದ ಅನುದಾನ ಕಡಿತ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿಯೇ ನಾವು ಮಾಡುತ್ತಿದ್ದೇವೆ. ಶಾಸಕ ಮುನಿರತ್ನ ಪ್ರತಿಭಟನೆಗೆ ಕೂರುತ್ತಾರೆ ಎಂಬುದಾದರೆ ಮೊದಲು ಕೂರಲಿ. ಅದನ್ನು ಮೊದಲು ಮಾಡಲಿ ಎಂದು ಹೇಳಿದ್ದಾರೆ.