ಹಳಿಯಾಳ: ಪಟ್ಟಣದ ಕೆಎಲ್‌ಎಸ್ ವಿಡಿಐಟಿ ಮತ್ತು ಬಿಸಿಎ ಮಹಾವಿದ್ಯಾಲಯದಲ್ಲಿ ‘ಸಂಘ ಒಂದು- ಸದಸ್ಯತ್ವ ನೂರು’ ಎಂಬ ಶೀರ್ಷಿಕೆಯಡಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನವನ್ನು ನಡೆಸಲಾಯಿತು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷೆ ಸುಮಂಗಲ ಅಂಗಡಿ, ಕನ್ನಡ ನಾಡು-ನುಡಿ ಉಳಿಸಿ, ಬೆಳೆಸುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಆಧುನಿಕ ತಂತ್ರಜ್ಞಾನದ ಕನ್ನಡ ಪುಸ್ತಕಗಳನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿರುವ ವಿಡಿಐಟಿ ಕಾರ್ಯವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ, ಕನ್ನಡವ ಉಳಿಸಿ ಬೆಳೆಸಲು ಮಹಾವಿದ್ಯಾಲಯವು ಅನೇಕ ಉಪಕ್ರಮಗಳನ್ನು ಹಮ್ಮಿಕೊಂಡಿದ್ದು, ಆಕಾಶವಾಣಿ ಧಾರವಾಡ ಕೇಂದ್ರದ ಮೂಲಕ ಜನಸಾಮಾನ್ಯರಿಗಾಗಿ ತಂತ್ರಜ್ಞಾನ ಮತ್ತು ಕರುಣಾಳು ಬಾ ಬೆಳಕೆ ಕಾರ್ಯಕ್ರಮಗಳನ್ನು ಪ್ರಾಯೋಜಿಸಿದೆ ಎಂದು ತಿಳಿಸಿದರು. ಈ ಅಭಿಯಾನದ ಮೂಲಕ ರಾಜ್ಯೋತ್ಸವದ ಮೊದಲು 100 ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕಲ್ಪವೃಕ್ಷ ಕನ್ನಡ ಸಂಘದ ಕಾರ್ಯದರ್ಶಿ ಪ್ರೊ.ರೋಹಿಣಿ ಕಲ್ಲೂರ ಸ್ವಾಗತಿಸಿದರು. ಶಾಂತಾರಾಮ ಚಿಬ್ಬುಲ್ಕರ್, ಪ್ರೊ.ಎಸ್.ಡಿ.ಕುಲಕರ್ಣಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳಾದ ಐಶ್ವರ್ಯ ಕ್ಷಿರಸಾಗರ ಮತ್ತು ಹರಿವರ್ಷ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.