ಹೊನ್ನಾವರ: ನಗರದ ಯುವಕ ಶ್ರೀಕಾಂತ ಮೇಸ್ತ ಚಿತ್ರಕಾರ, ಪೇಂಟರ್ ಹಾಗೂ ಕಲಾಸಕ್ತರಾಗಿದ್ದು, ತನ್ನ ಆದಾಯದಲ್ಲಿ ಒಂದು ಭಾಗವನ್ನು ಸಮಾಜದ ಸೇವೆ ಮೀಸಲಿಡುವ ಸ್ವಭಾವದ ಸಜ್ಜನರಾಗಿದ್ದಾರೆ. ದುರ್ಗಾಕೇರಿಯಲ್ಲಿರುವ ಮಾರುತಿ ಮಂದಿರ ಬಹುಕಾಲದಿಂದ ಪೇಂಟಿಂಗ್ ಮಾಡದೇ ಬಣ್ಣ ಮಾಸಿದ್ದನ್ನು ಕಂಡು ದಾನಿಗಳಿಂದ ಪೇಂಟ್ ಪಡೆದು ಉಚಿತವಾಗಿ ಪೇಂಟ್ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ದಾಂಡೇಲಿ, ಹೊನ್ನಾವರ ಮಾತ್ರವಲ್ಲ ಕೆಲಸ ಮಾಡಿದಲ್ಲೆಲ್ಲ ವಿಶೇಷವಾಗಿ ಶಾಲೆ ಮತ್ತು ದೇವಸ್ಥಾನಗಳಿಗೆ ಉಚಿತ ಬಣ್ಣ ಹಚ್ಚುವ ಇವರ ಸೇವೆ ನಡೆದಿದೆ. ಪದ್ಮಶ್ರೀ ವಿಜೇತ ಸುಕ್ರಜ್ಜಿ, ತುಳಸಿ ಗೌಡ ಮೊದಲಾದವರನ್ನು ಮನೆಗೆ ಹೋಗಿ ಸನ್ಮಾನಿಸಿ, ಬಂದ ಇವರು ನಗರದ ರಾಮತೀರ್ಥಕ್ಕೂ ಪೇಂಟಿಂಗ್ ಮಾಡಿದ್ದಾರೆ.
ದಾನಿಗಳಾದ ರಂಗರಾಯ ಕಾಮತ, ತುಳಸಿದಾಸ ಮೇಸ್ತ, ಸಂತೋಷ ಶೇಟ್, ಶ್ರೀಕಾಂತ ಮಹಾಲೆ, ಅರುಣ ಫುಲ್ಕರ್ ಮೊದಲಾದವರು ಇವರಿಗೆ ನೆರವಾಗಿದ್ದಾರೆ. ಶ್ರೀಕಾಂತ ಮೇಸ್ತರ ಅಳಿಲು ಸೇವೆ ಮೆಚ್ಚುವಂತಹದ್ದಾಗಿದೆ.