ಕಾರವಾರ: ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ನಡೆಯಲಿರುವ ಜನತಾ ದರ್ಶನಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಮಂಗಳವಾರ ತೆರಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಬಸ್ ಸಂಚರಿಸಿತು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಬಸ್ ಏರಿದರು. ಆಯುಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮಹಿಳೆಯರಾಗಿದ್ದು, ಅವರು ಆಧಾರ ಕಾರ್ಡ್ ತೋರಿಸಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯ ಪಡೆದರು. ಆದರೆ, ಜಿಲ್ಲಧಿಕಾರಿ ಗಂಗೂಬಾಯಿ ಮಾನಕರ ಮಾತ್ರ ಹಣ ನೀಡಿ ಟಿಕೆಟ್ ಪಡೆದರು. ಪುರುಷ ಅಧಿಕಾರಿಗಳು ಟಿಕೆಟ್ ಖರೀದಿಸಿ ಪ್ರಯಾಣಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶಗೋಪು ರಜಪೂತ್ ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಬಸ್‌ನಲ್ಲಿದ್ದರು.
‘ಸರ್ಕಾರದ ಸೂಚನೆಯಂತೆ ಪ್ರತಿ 15 ದಿನಕ್ಕೊಮ್ಮೆ ತಾಲ್ಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಯಲಿದೆ. ಪ್ರತಿ ಇಲಾಖೆಗಳ ವಾಹನಗಳನ್ನು ಬಳಸಿ ಸಾಗಿದರೆ ಇಂಧನ ವೆಚ್ಚ ಸೇರಿದಂತೆ ಅನಗತ್ಯ ಖರ್ಚು ಹೆಚ್ಚುತ್ತದೆ. ಹಣದ ಉಳಿತಾಯದ ಜತೆಗೆ ಎಲ್ಲ ಅಧಿಕಾರಿಗಳೂ ಏಕಕಾಲಕ್ಕೆ ತೆರಳುವ ಉದ್ದೇಶಕ್ಕೆ ಬಸ್ ಪ್ರಯಾಣ ಮಾಡಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಪ್ರತಿಕ್ರಿಯಿಸಿದರು.