ಭಟ್ಕಳ: ತಾಲೂಕಿನ ಕಟಗಾರಕೊಪ್ಪ ಅತ್ತಿಬಾರದಲ್ಲಿ ಮಹಿಳೆಯೋರ್ವರು ಗಂಡನ ಮನೆಯ ತೋಟದ ಬಾವಿಯಲ್ಲಿ ಬಿದ್ದು ಅನುಮಾನಾಸ್ಪದವಾಗಿ ಸಾವನಪ್ಪಿದ್ದು, ಮನನೊಂದು ಪತಿಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಲಕ್ಷ್ಮೀ ಗೊಂಡ (32) ಮೃತ ಮಹಿಳೆ. ಈಕೆ ಕಳೆದ ಒಂದೂವರೆ ವರ್ಷದ ಹಿಂದೆ ಮುರ್ಡೇಶ್ವರದ ಕಟಗಾರಕೊಪ್ಪದ ಅತ್ತಿಬಾರ ಗ್ರಾಮದ ವೆಂಕಟೇಶ ಗೊಂಡರನ್ನು ಮದುವೆಯಾಗಿದ್ದರು. ಭಾನುವಾರ ರಾತ್ರಿ ಅತ್ತಿಬಾರದ ತೋಟದ ಬಾವಿಯಲ್ಲಿ ಅನುಮಾನಾಸ್ಪದವಾಗಿ ಈಕೆಯ ಮೃತದೇಹ ಪತ್ತೆಯಾಗಿದೆ. ಅಕ್ಕನ ಸಾವಿನಲ್ಲಿ ಅನುಮಾನವಿದ್ದು, ಪ್ರಕರಣದ ಕೂಲಂಕುಷ ತನಿಖೆಯಾಗಬೇಕೆಂದು ಮೃತಳ ಸಹೋದರ ಜನ್ನ ಗೊಂಡ ಮುರುಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ತಹಶೀಲ್ದಾರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಸಿಪಿಐ ಸಂತೋಷ ಕಾಯ್ಕಿಣಿ, ಪಿಎಸೈ ಮಂಜುನಾಥ ಹಾಗೂ ಪೊಲೀಸ್ ಸಿಬ್ಬಂದಿ ಅತ್ತಿಬಾರ ಗ್ರಾಮದ ಮೃತಳ ಮನೆಗೆ ತೆರಳಿ ಸ್ಥಳ ಪರಿಶೀಲನೆ ಮಾಡಿ ಪಂಚನಾಮೆ ನಡೆಸಿದ್ದಾರೆ. ಮೃತದೇಹವನ್ನು ಮುರುಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆದರೆ ಸೋಮವಾರ ಆಸ್ಪತ್ರೆಯತ್ತ ಜಮಾಯಿಸಿದ ಮೃತಳ ಕುಟುಂಬಸ್ಥರು ಹಾಗೂ ಸಂಬAಧಿಕರು, ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪಿಎಸೈ ಮಂಜುನಾಥ ಹಾಗೂ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಪದಾಧಿಕಾರಿಗಳ ಜೊತೆಗೆ ಮಾತಿನ ಚಕಮಕಿಯೂ ನಡೆಯಿತು.
ಭಾನುವಾರ ಅಕ್ಕ ಕಾಣಿಸುತ್ತಿಲ್ಲವೆಂದು ಆಕೆಯ ಗಂಡನ ಮನೆಯವರಿಂದ ಕರೆ ಬಂದಿತ್ತು. ಹೀಗಾಗಿ ತಕ್ಷಣ ಅತ್ತಿಬಾರಕ್ಕೆ ತೆರಳಿದಾಗ ಮನೆಯ ಹೊರಗೆ ಮೃತದೇಹವನ್ನು ಇಡಲಾಗಿತ್ತು. ಆಕೆಯ ಕಿವಿ, ಮೂಗು, ಬಾಯಿಯಿಂದ ರಕ್ತ ಬರುತ್ತಿರುವುದು ಕೂಡ ಕಂಡುಬAದಿದೆ. ತೋಟದ ಬಾವಿಯಲ್ಲಿ ಬಿದ್ದಿದ್ದಳೆಂದು ಆಕೆಯ ಗಂಡನ ಮನೆಯವರು ತಿಳಿಸಿದ್ದಾರೆ. ಆದರೆ ಈ ಹಿಂದೆ ನನ್ನ ಅಕ್ಕ ಸಾಕಷ್ಟು ಬಾರಿ ಅತ್ತೆ ಕಿರುಕುಳ ನೀಡುತ್ತಿದ್ದಾಳೆಂದು ನಮ್ಮ ಗಮನಕ್ಕೆ ತಂದಿದ್ದಳು ಎಂದು ಈ ವೇಳೆ ಮೃತಳ ಸಹೋದರ ದೂರಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಇನ್ನು ಇದೇವೇಳೆ ಮೃತಳ ಪತಿ ವೆಂಕಟೇಶ ಗೊಂಡ ಪತ್ನಿ ಸಾವಿನ ವಿಚಾರ ತಿಳಿದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಆತನ ಕುಟುಂಬಸ್ಥರು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.