ಅಂಕೋಲಾ: ತಾಲೂಕಿನಲ್ಲಿ ಪ್ರಸ್ತುತ ವರ್ಷ ಅರಣ್ಯದಲ್ಲಿ ವಾಸಿಸುವ ಕ್ರೂರ ಪ್ರಾಣಿಗಳ ದಾಳಿಗೆ ಬರೋಬ್ಬರಿ 51 ಸಾಕು ಪ್ರಾಣಿಗಳು ತಮ್ಮ ಜೀವ ತೆತ್ತಿವೆ ಎಂಬ ಸುದ್ದಿ ರೈತ ಬಾಂಧವರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದು, ಈ ವಿಷಯ ಸ್ವತಃ ಅರಣ್ಯ ಇಲಾಖೆಯ ಅಧಿಕಾರಿಗಳಿಂದಲೇ ಹೊರಬಿದ್ದಿದೆ.
ಅಂಕೋಲಾ ತಾಲೂಕು ಸುಮಾರು 75 ಸಾವಿರ ಹೆಕ್ಟೇರ್ ಅರಣ್ಯ ಹೊಂದಿದ್ದು, ತಕ್ಕಂತೆ ಕಾಡುಪ್ರಾಣಿಗಳನ್ನು ಸಹ ಹೊಂದಿದೆ. ಹುಲಿ, ಚಿರತೆ, ನರಿ, ತೋಳ ಮೊದಲಾದ ಪ್ರಾಣಿಗಳು ಹೆಚ್ಚಾಗಿ ವಾಸಿಸುತ್ತವೆ. ಇಲ್ಲಿನ ಕೆಲವು ಹಳ್ಳಿ ಸಮುದಾಯಗಳು ತಮ್ಮ ಜೀವನ ನಿರ್ವಹಣೆಗೆ ಕಾಡುಗಳನ್ನು ಪರ್ಯಾಯವಾಗಿ ಅವಲಂಬಿಸಿದ್ದಾರೆ. ಹೀಗಾಗಿ ಇವರು ಅರಣ್ಯಕ್ಕೆ ಹತ್ತಿರದ ಗ್ರಾಮಗಳಲ್ಲಿ ವಾಸ ಮಾಡುತ್ತಾರೆ. ಕಾಡುಪ್ರಾಣಿಗಳು ಕೆಲವೊಮ್ಮೆ ತಮ್ಮ ಆಹಾರ ಶೋಧಕ್ಕಾಗಿಯೋ ಅಥವಾ ದಾರಿ ತಪ್ಪಿಯೋ ಗ್ರಾಮಗಳಿಗೆ ಲಗ್ಗೆ ಇಡುತ್ತವೆ. ಆಗ ಗ್ರಾಮಗಳಲ್ಲಿ ರೈತರು ಸಾಕಿದ ಹಸು, ಕುರಿ, ನಾಯಿ, ಬೆಕ್ಕು, ಕೋಳಿ ಮುಂತಾದ ಸಾಕು ಪ್ರಾಣಿಗಳನ್ನು ಭೇಟೆಯಾಡಿ ತಿನ್ನುತ್ತಿರುವುದರಿಂದ ರೈತರು ತಮ್ಮ ಜೀವನೋಪಾಯಕ್ಕಾಗಿ ಸಾಕಿದ ಪ್ರಾಣಿಗಳ ಸಾವಿನಿಂದ ತೀವ್ರ ನಷ್ಟಕ್ಕೆ ಒಳಗಾಗುತ್ತಿದ್ದಾರೆ.
ಹಿಂದಿನ ಐದಾರು ವರ್ಷಗಳ ಅಂಕಿ ಅಂಶಗಳನ್ನು ಪರಿಗಣಿಸಿದರೆ ಸಾಮಾನ್ಯವಾಗಿ ಕಾಡು ಪ್ರಾಣಿಗಳ ಹಾವಳಿಯಿಂದ ಮೃತಪಟ್ಟ ಸಾಕು ಪ್ರಾಣಿಗಳ ಸಂಖ್ಯೆ ವಾರ್ಷಿಕ ಸರಾಸರಿ ಅಂದಾಜು 20ರಿಂದ 30 ಇರುತ್ತಿತ್ತು. ಆದರೆ ಪ್ರಸ್ತುತ ವರ್ಷದಲ್ಲಿ ದಾಳಿಗೆ ಒಳಗಾದ ಸಾಕು ಪ್ರಾಣಿಗಳ ಸಂಖ್ಯೆ 51ಕ್ಕೆ ಏರಿದೆ. ಸಾಮಾನ್ಯವಾಗಿ ಈ ಅಂಕಿ- ಅಂಶಗಳನ್ನು ನೋಡಿದಾಗ ಈ ಭಾಗದ ರೈತ ಬಾಂಧವರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆಯು ಹೆಚ್ಚಿನ ಮುತುವರ್ಜಿ ವಹಿಸಿ ಹಾನಿಯ ಪ್ರಮಾಣ ತಕ್ಕ ಮಟ್ಟಿಗೆಯಾದರೂ ತಡೆಯಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.