ಮುಂಡಗೋಡ: ಅಗಡಿ ಗ್ರಾಮದ ಗದ್ದೆಗಳಲ್ಲಿ ಕರಡಿಗಳ ಹೆಜ್ಜೆ ಗುರುತು ಕಂಡು ರೈತರು ಆತಂಕಿತರಾಗಿದ್ದಾರೆ.
ತಾಲೂಕಿನ ಅಗಡಿ ಗ್ರಾಮದ ಅಗಡಿ ದೊಡ್ಡ ಕೆರೆ ಸಮೀಪದ ಗದ್ದೆಗಳಲ್ಲಿ ಮತ್ತು ಶಾಂತಿ ನಗರ ದಿಂದ ಬಸಾಪುರ ಮಾರ್ಗ ತೆರಳುವ ಮಾರ್ಗ ಸಮೀಪದ ಸುತ್ತ ಮುತ್ತಲಿನ ಗದ್ದೆಗಳಲ್ಲಿ ಕರಡಿಗಳು ಸಂಚರಿಸುತ್ತಿದೆ. ಆ ಮಾರ್ಗದಲ್ಲಿ ಸಂಚರಿಸುವರು ಕರಡಿಯ ಬಗ್ಗೆ ಗಮನವಿರಲಿ ಎಂದು ಕೆಲ ರೈತರು ಇನ್ನಿತರ ರೈತರಿಗೆ ಸಂದೇಶ ರವಾನಿಸುತ್ತಿದ್ದಾರೆ.
ಕರಡಿಯ ಭೀತಿಯಿಂದಾಗಿ ಆ ಭಾಗದ ರೈತರು ತಮ್ಮ ಗದ್ದೆಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಆ ಭಾಗದ ಹಲವು ರೈತರು ಗದ್ದೆ ಸುತ್ತ ಮುತ್ತ ತೆರಳಿ ಕರಡಿಗೆ ಬೆದರಿಸಿ ಕಾಡಿಗೆ ಸೇರಲು ಪಟಾಕಿ ಮತ್ತು ಗರ್ನಾಲ್ ಮದ್ದು ಸಿಡಿಸಿದ್ದಾರೆ. ಗದ್ದೆಗಳಲ್ಲಿ ಪಟಾಕಿ ಸಿಡಿಸಿದರೂ ಮತ್ತೆ ಕರಡಿ ಪ್ರತ್ಯಕ್ಷವಾಗುತ್ತಿದೆ. ಹಾಗಾಗಿ ಅರಣ್ಯ ಇಲಾಖೆಯವರು ಕರಡಿಯನ್ನ ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.