ಶಿರಸಿ: ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಅನಾದಿಕಾಲದ ಅರಣ್ಯ ಅತಿಕ್ರಮಣದಾರ ಸೋಮಯ್ಯ ಜೋಗಿಯು ಕಂದಾಯ ಇಲಾಖೆಯ ಮಾನವೀಯತೆ ಮರೆತ ನಡೆ, ಬಲಪ್ರಯೋಗ ಹಾಗೂ ಕಾನೂನಿಗೆ ವ್ಯತಿರಿಕ್ತವಾಗಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ವಿಷಾದಕರ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಸೋಮಯ್ಯ ಜೋಗಿಯವರು ಅನಾದಿಕಾಲದಿಂದಲೂ ದೊಡ್ನಳ್ಳಿ ಗ್ರಾಮದ ಸರ್ವೇ ನಂ 21 ರ ಕಂದಾಯ ಭೂಮಿಯನ್ನು ಅತಿಕ್ರಮಿಸಿ, ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಅತಿಕ್ರಮಣ ಕ್ಷೇತ್ರದ ಮೇಲೆಯೇ ಅವಲಂಬಿತರಾಗಿದ್ದಾರೆ. ಆದರೆ ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳು ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಕಂದಾಯ ಕಾಯಿದೆಯ ವಿಧಿ-ವಿಧಾನ ಅನುಸರಿಸದೇ ಮತ್ತು ಭೂ ಕಬಳಿಕೆ ನಿಷೇಧ ಕಾಯಿದೆ ನಿಯಮ ಅನುಸರಿಸದೇ, ಬಲಪ್ರಯೋಗದಿಂದ ಒಕ್ಕಲೆಬ್ಬಿಸುವ ಪ್ರಕ್ರೀಯೆಗೆ ಮುಂದಾಗಿರುವುದು ಸರಕಾರದ ನೀತಿಗೆ ವಿರುದ್ಧವಾಗಿದೆ ಎಂದು ರವೀಂದ್ರ ನಾಯ್ಕ ಆಕ್ರೋಶ ಹೊರಹಾಕಿದರು.
ಅಲ್ಲದೇ, ಕಾನೂನಿಗೆ ವ್ಯತಿರಿಕ್ತವಾಗಿ ಕ್ರಮ ತೆಗೆದುಕೊಂಡು ದೌರ್ಜನ್ಯವೆಸಗಿದ ಕಂದಾಯ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಉಸ್ತುವಾರಿ ಸಚಿವರಿಗೆ ರವೀಂದ್ರ ನಾಯ್ಕ ಅಗ್ರಹಿಸಿದ್ದಾರೆ. ಸಂತ್ರಸ್ಥರನ್ನು ಜಿಲ್ಲಾ ಸಂಚಾಲಕ ನೆಹರೂ ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ಕುಮಟಾ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ ಭೇಟಿಯಾದರು.