ಅಂಕೋಲಾ: ಶಾಸಕ ಸತೀಶ್ ಸೈಲ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಆರೋಪ ಕೇಳಿಬಂತು.
ಸಭೆಯಲ್ಲಿ ಮಾತನಾಡಿದ ಮಾಹಿತಿ ಹಕ್ಕು ಕಾರ್ಯಕರ್ತ ಚೇತನ ನಾಯಕ, ಇಂದಿರಾ ಕ್ಯಾಂಟೀನ್‌ನಲ್ಲಿ ಊಟಕ್ಕೆ ಬರುವ ಜನ ಬಹುತೇಕ ಕಡಿಮೆ. ಆದರೂ ಸಹ ಕ್ಯಾಂಟೀನ್ ದಾಖಲೆಯಲ್ಲಿ ಸುಮಾರು 280- 300 ಊಟ ದಾಖಲಾಗುತ್ತದೆ. ಕ್ಯಾಂಟೀನ್‌ನಲ್ಲಿ ಸಿಸಿಟಿವಿ ಇದ್ದರೂ ಸಹ ಇಲ್ಲವೆಂದು ಮಾಹಿತಿ ಹಕ್ಕಿನಲ್ಲಿ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ಎಷ್ಟು ಊಟ ಖರ್ಚಾಯಿತು ಎಂಬುದು ಸಹ ತಿಳಿಯುತ್ತಿಲ್ಲ. ಕೇವಲ ದತ್ತಾಂಶಗಳಲ್ಲಿ ತೋರಿಸಲು ಮಾತ್ರ ಅಡಿಗೆ ಮಾಡುತ್ತಿದ್ದಾರೆ ಹೊರತು ದಾಖಲೆಗಳಲ್ಲಿ ಇರುವಷ್ಟು ಊಟ ಹೋಗುತ್ತಿಲ್ಲ. ಯಾರೋ ಅಡುಗೆ ಮಾಡುತ್ತಾರೆ, ಇನ್ನಾರದೋ ಅಕೌಂಟಿಗೆ ಹಣ ಸಂದಾಯವಾಗುತ್ತದೆ. ಇದರಿಂದಾಗಿ ಅಧಿಕಾರಿಗಳು ಹಾಗೂ ಸಂಬಂಧಿಸಿದ ಮಹಾಪುರುಷರು ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿರುವುದು ಎದ್ದು ಕಾಣುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಆಯುಷ್ಮಾನ್ ಕಾರ್ಡ್ ಹೊಂದಿದ್ದರು ಸಹ ದೊಡ್ಡ ಅಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಈ ರೋಗಕ್ಕೆ ನಮ್ಮಲ್ಲಿ ಕಾರ್ಡ್ ಲಾಗು ಆಗುವುದಿಲ್ಲ ಅಥವಾ ಮೊದಲು ಸರಕಾರಿ ಆಸ್ಪತ್ರೆಯಿಂದ ಲೆಟರ್ ತನ್ನಿ ಎಂದು ಹೇಳಿ ಅನಾವಶ್ಯಕವಾಗಿ ಅಲೆದಾಡಿಸುತ್ತಾರೆ. ಇದಕ್ಕೆ ಶಾಶ್ವತ ಪರಿಹಾರ ಕೊಡಿ ಎಂದು ಸ್ಥಳೀಯ ಕೆಲವರು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸೈಲ್, ಇನ್ನುಮುಂದೆ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ಯಾವ ಕಾಲಂ ಅಡಿಯಲ್ಲಿ ಯಾವ ಚಿಕಿತ್ಸೆ ನೀಡುತ್ತಾರೆ ಎಂದು ಬೋರ್ಡ್ ಹಾಕಿ ಮತ್ತು ಆಯುಷ್ಮಾನ್ ಕಾರ್ಡ್‌ನ ಲಾಭಾಂಶ ಪಟ್ಟಿಯನ್ನು ಆಸ್ಪತ್ರೆಯಲ್ಲಿ ಬೋರ್ಡ್ ಅಳವಡಿಸಿ. ಆ ಮೂಲಕ ಜನರಲ್ಲಿ ಅರಿವು ಮೂಡಿಸಿ ಎಂದು ಸಂಬಂಧಪಟ್ಟವರಿಗೆ ಸೂಚಿಸಿದರು.
ಬರಪೀಡಿತ ತಾಲೂಕು ಘೋಷಣೆ: ಕೃಷಿ ಇಲಾಖೆಯ ವರದಿಯ ಪ್ರಕಾರ ವಾಡಿಕೆಗಿಂತ ಕಡಿಮೆ ಮಳೆಯಿಂದ ಇಳುವರಿ ಕಡಿಮೆಯಾಗಿದೆ. ಸಕಾಲದಲ್ಲಿ ಮಳೆಯಾಗದ ಕಾರಣ ಸರಿಯಾದ ಬೆಳೆ ಬಾರದೆ ಇರುವುದರಿಂದ ಅಂಕೋಲಾ ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಹೇಳಿದರು. ಅಕ್ಷರ ದಾಸೋಹ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ನಿವಾರಿಸಲು ಪಿಡಿಒಗಳಿಗೆ ಎಲ್ಲ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಲು ಸೈಲ್ ತಾಕೀತು ಮಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಯ ನಿರ್ಮಿತಿ ಕೇಂದ್ರದಿಂದ ಕಾಮಗಾರಿ ಮಾಡಲಾದ ಶಿರಕುಳಿ ಗ್ರಾಮದ ಕಟ್ಟಡದ ಅಸಮರ್ಪಕ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಶಾಸಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಪಂಚಾಯತ್ ರಾಜ್ ಇಲಾಖೆಯ 12 ಕಟ್ಟಡದಲ್ಲಿ 8 ಕಟ್ಟಡ ಪೂರ್ಣಗೊಂಡಿದ್ದು, 4 ಕಟ್ಟಡಗಳು ಪ್ರಗತಿಯಲ್ಲಿವೆ. ಪ್ರತ್ಯೇಕ ರೂ. 52,1500 ರಲ್ಲಿ ವಿವಿಧ ಕಾಮಗಾರಿಗಳನ್ನು ಪ್ರಗತಿಯಲ್ಲಿ ಇಡಲಾಗಿದೆ. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯಿಂದ ಪಂಚಾಯತಿಗೆ ಸಂಬಂಧಿಸಿದ ಎಲ್ಲ ಕಾಮಗಾರಿ ಭೂಮಿಪೂಜೆ ಸಮಯದಲ್ಲಿ ಪಂಚಾಯತಿ ಅಧ್ಯಕ್ಷರ ಹಾಜರಾತಿ ಕಡ್ಡಾಯ ಎಂದು ತಿಳಿಸಿದರು. ಈ ವರ್ಷ ವನ್ಯಪ್ರಾಣಿಗಳಿಂದ 51 ಸಾಕು ಪ್ರಾಣಿಗಳಿಗೆ ಹಾನಿಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಗೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಕುರಿತ ಹಲವಾರು ಪ್ರಗತಿ ಹಾಗೂ ಲೋಪದೋಷಗಳ ಬಗ್ಗೆ ಚರ್ಚಿಸಿ ಪರಿಹಾರ ಸೂಚಿಸಲಾಯಿತು.
ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಎಂ. ಸ್ವಾಗತಿಸಿದರು. ಪಿಡಿಒ ನಾಗೇಂದ್ರ ನಾಯ್ಕ ಕಳೆದ ಸಭೆಯಲ್ಲಿ ಕೈಗೊಂಡ ನಡುವಳಿ ಕುರಿತು ವರದಿ ವಾಚಿಸಿ ವಂದಿಸಿದರು. ತಹಸೀಲ್ದಾರ್ ಅಶೋಕ ಭಟ್ಟ, ತಾಲೂಕಾ ಪಂಚಾಯತ ಆಡಳಿತಾಧಿಕಾರಿ ನಾಗೇಶ ಎ.ರಾಯ್ಕರ್, ಎಲ್ಲ ಸರಕಾರಿ ಅಧಿಕಾರಿಗಳು ಹಾಗೂ ನಾಗರಿಕರು ಹಾಜರಿದ್ದರು.
- ಸರಕಾರಿ ಆಸ್ಪತ್ರೆಯಿಂದ ತುರ್ತು ಆಸ್ಪತ್ರೆಗೆ ಕೊಂಡು ಹೋದರೆ ತುರ್ತು ಆಸ್ಪತ್ರೆಯ ಕಡೆಯಿಂದ ಚಾಲಕನಿಗೆ 5000 ಸಿಗುತ್ತದೆ. ಈ ವಿಷ0ಯ ಬಹುತೇಕ ಜನರಿಗೆ ಗೊತ್ತಿಲ್ಲ. ಹಾಗಿದ್ದರೂ ರೋಗಿಯ ಕಡೆಯಿಂದಲೂ ಸಹ ಹಣ ಪರೋಕ್ಷವಾಗಿ ತೆಗೆದುಕೊಳ್ಳಲಾಗುತ್ತದೆ. ಹೀಗಿದ್ದಾಗಲೂ ಸಹ ಸಕಾಲದಲ್ಲಿ ಅಂಬ್ಯುಲೆನ್ಸ್ ದೊರೆಯುವುದಿಲ್ಲ ಎಂಬುದು ಸತ್ಯಕ್ಕೆ ದೂರವಾದದ್ದು.
– ಸತೀಶ ಸೈಲ್, ಶಾಸಕ