ಹಳಿಯಾಳ: ತಾಲೂಕಿನ ತಟ್ಟಿಹಳ್ಳ ಅರಣ್ಯ ಪ್ರದೇಶದಲ್ಲಿ ಪತ್ನಿಯನ್ನ ಕೊಲೆ ಮಾಡಿದ ಆರೋಪಿಗೆ ಶಿರಸಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಾಧಿ ಶಿಕ್ಷೆಯನ್ನು ನೀಡಿ, ಆದೇಶಿಸಿದ್ದಾರೆ.
2014ರ ಮಾರ್ಚ್ 23 ರಂದು ತಾಲೂಕಿನ ತಟ್ಟಿಹಳ್ಳ ಫಾರೆಸ್ಟ್‌ನಲ್ಲಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಸಗ್ಗುಬಾಯಿ ಎನ್ನುವ ಮಹಿಳೆಯನ್ನು ಹತ್ಯೆ ಮಾಡಲಾಗಿತ್ತು. ತನಿಖೆ ನಡೆಸಿದ ಅಂದಿನ ಹಳಿಯಾಳ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶ್ರೀನಿವಾಸ ಹಾಂಡ ನೇತೃತ್ವದ ಪೊಲೀಸರ ತಂಡ ಬಾಬು ಸಗ್ಗು ಗಾವಡೆ ಎನ್ನುವ ಆರೋಪಿಯನ್ನು ಬಂಧಿಸಿದ್ದರು.
ಸರಾಯಿ ಕುಡಿಯಲು ಹಣ ಕೊಡುವಂತೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಡುತ್ತಿದ್ದ ಬಾಬು ಸಗ್ಗು ಗಾವಡೆ, ಕಟ್ಟಿಗೆ ತರಲೆಂದು ತಟ್ಟಿಹಳ್ಳ ಅರಣ್ಯಕ್ಕೆ ಸಗ್ಗುಬಾಯಿಯನ್ನ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಹಣ ಕೊಡುವಂತೆ ಮತ್ತೆ ಜಗಳವಾಡಿದ್ದು ಈ ವೇಳೆ ಸಿಟ್ಟಿಗೆದ್ದಿದ್ದ ಬಾಬು ಗಾವಡೆ ಪತ್ನಿಗೆ ತನ್ನ ಬಳಿಯಿದ್ದ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದನು.
ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಧೀಶರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡವನ್ನು ಮತ್ತು ಮೃತಳ ಅವಲಂಬಿತರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರೊಸಿಕ್ಯೂಟರ್ ರಾಜೇಶ್ ಎಂ ಮಳಗಿಕರ್ ಆರೋಪಿಗೆ ಶಿಕ್ಷೆ ವಿಧಿಸಬೇಕೆಂದು ತಮ್ಮ ಸುದೀರ್ಘ ವಾದ ಮಂಡಿಸಿದ್ದರು.