ಹಳಿಯಾಳ: ಇಲ್ಲಿನ ಕಂದಾಯ ಇಲಾಖೆ ಕಚೇರಿಯಲ್ಲಿ ಸಾಕಷ್ಟು ಭ್ರಷ್ಟಾಚಾರವಾಗುತ್ತಿದೆ ಹಾಗೂ ಸಾರ್ವಜನಿಕರಿಗೆ ಕೆಲಸ ಮಾಡಿಕೊಡಲು ಸತಾಯಿಸುತ್ತಿದ್ದಾರೆ ಎಂಬ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಕುಂದು- ಕೊರತೆ ಅರಿಯಲು ವಾರದಲ್ಲಿ ಒಂದು ದಿನ ತಾಲೂಕು ಕೇಂದ್ರದಲ್ಲಿ ಲಭ್ಯವಿದ್ದು, ಅಹವಾಲು ಸ್ವೀಕರಿಸಲಿದ್ದೇನೆ ಎಂದು ಉಪವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಬರುತ್ತಿದ್ದು, ಸಾರ್ವಜನಿಕರಿಗೆ ಸರಿಯಾದ ಸೇವೆ ಸಿಗುತ್ತಿಲ್ಲ ಎಂಬ ದೂರು ನನ್ನ ಗಮನಕ್ಕೂ ಬಂದಿದೆ. ಹೀಗಾಗಿ ಇದನ್ನು ನಿಭಾಯಿಸುವ ಜವಾಬ್ದಾರಿ ನನ್ನದಾಗಿರುತ್ತದೆ. ಪ್ರತಿ ಬುಧವಾರ ಜೊಯಿಡಾದಲ್ಲಿ ಮಧ್ಯಾಹ್ನ 12ರಿಂದ 1 ಗಂಟೆಯವರೆಗೆ, ಪ್ರತಿ ಗುರುವಾರ ಹಳಿಯಾಳದಲ್ಲಿ ಮಧ್ಯಾಹ್ನ 2ರಿಂದ 3 ಗಂಟೆಯವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡುತ್ತೇನೆ ಎಂದು ತಿಳಿಸಿದರು.
ಈ ವೇಳೆ, ಸಾರ್ವಜನಿಕರ ಅರ್ಜಿಯನ್ನು ನಮ್ಮ ಅಧಿಕಾರಿಗಳು ವಿಳಂಬ ಅಥವಾ ಬಾಕಿ ಇರಿಸಿದರೆ, ಕೆಲಸ ಮಾಡಿಕೊಡದೇ ಇದ್ದರೆ ಅಥವಾ ಹಣದ ಬೇಡಿಕೆ ಇಟ್ಟಿದ್ದರೆ, ಸತಾಯಿಸಿದರೆ ನೇರವಾಗಿ ನನಗೆ ದೂರು ನೀಡಬಹುದು ಎಂದ ಅವರು, ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಿಸಿಟಿವಿ ಇಲ್ಲದೆ ಬಹಳಷ್ಟು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತಾಗಿದೆ. ನಿರಂತರವಾಗಿ ಈ ಬಗ್ಗೆ ದೂರು ಬರುತ್ತಿದೆ. ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಸೂಚಿಸುತ್ತೇನೆ. ವಾರಕ್ಕೊಮ್ಮೆ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.