ಯಲ್ಲಾಪುರ: ಜಿಲ್ಲೆಯಲ್ಲಿ ಶೇಕಡ 80ರಷ್ಟು ಅರಣ್ಯ ಸಂಪತ್ತು ಇದೆ. ಅರಣ್ಯ, ಅರಣ್ಯ ಸಂಪತ್ತು, ವನ್ಯಜೀವಿ ಸಂಪತ್ತು ಇಲ್ಲಿ ಸಾರ್ವಜನಿಕರೊಂದಿಗೆ ಅನೋನ್ಯವಾಗಿದೆ. ಇಂತಹ ಸಂಬ0ಧ ಪ್ರಪಂಚದ ಬೇರೆ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ನಮ್ಮ ಜಿಲ್ಲೆಯಲ್ಲಿ ಅರಣ್ಯ ಸಂರಕ್ಷಣೆ ಹಾಗೂ ಅಭಿವೃದ್ಧಿಯಲ್ಲಿ ಜನರ ಪಾಲುದಾರಿಕೆ ಹಿಂದಿನಿ0ದಲೂ ಇದೆ ಎಂದು ಕೆನರಾ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ವಸಂತ ರೆಡ್ಡಿ ಹೇಳಿದರು.
ಅವರು ಅರಣ್ಯ ವಿಭಾಗಿಯ ಕಚೇರಿ ಆವರಣದಲ್ಲಿ ಬುಧವಾರ 69ನೇ ವನ್ಯಜೀವಿ ಸಪ್ತಾಹ-2023ರ ಅಂಗವಾಗಿ ಯಲ್ಲಾಪುರ ಅರಣ್ಯ ವಿಭಾಗದ ವತಿಯಿಂದ ಕಾಲ್ನಡಿಗೆ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡುತ್ತಿದ್ದರು. ವನ್ಯಜೀವಿಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯ ಮಾಡುವ ಉದ್ದೇಶದಿಂದ ಹಾಗೂ ವನ್ಯ ಜೀವಿ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಪ್ರೋತ್ಸಾಹಿಸಲು ಈ ವರ್ಷ ಇದೇ ಧ್ಯೇಯವಾಕ್ಯದೊಂದಿಗೆ ವನ್ಯಜೀವಿ ಸಪ್ತಾಹ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಹಾಗೇಯೇ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಏಳು ದಿನಗಳ ಕಾಲ ವನ್ಯಜೀವಿಗಳ ಸಂರಕ್ಷಣಾ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ವಿದ್ಯಾರ್ಥಿಗಳು ವನ್ಯಜೀವಿಗಳ ಬಗ್ಗೆ ಅತಿ ಹೆಚ್ಚು ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಮಾತನಾಡಿ, ವನ್ಯಜೀವಿ ಸಪ್ತಾಹದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಕಾಲ್ನಡಿಗೆ ಜಾಥಾ ಮುಂತಾದ ಕಾರ್ಯಕ್ರಮಗಳನ್ನು ಮುಂದಿನ ಒಂದು ವಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಅರಣ್ಯ, ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಆಗಬೇಕು, ಎನ್ನುವ ನಿಟ್ಟಿನಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ತಹಶೀಲ್ದಾರ್ ಎಂ ಗುರುರಾಜ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುನಿಲ ಗಾವಡೆ, ಎಸಿಎಫ್‌ಗಳಾದ ಹಿಮವತಿ ಭಟ್, ಎಚ್.ಆನಂದ್, ರವಿ, ಡಿಫೋ ಎಸಿಎಪ್ ಅಶೋಕ ಬಾಬು, ಆರ್‌ಎಫ್‌ಒಗಳಾದ ಎಲ್.ಎ.ಮಠ, ಶಿಲ್ಪಾ ನಾಯ್ಕ, ಡಿ.ಎಲ್.ಮಿರ್ಜಾನಕರ್, ಅಮಿತ ಚೌಹಾನ್, ವಾಗೇಶ್, ಎಂ ಎಚ್ ನಾಯ್ಕ ಹಾಗೂ ಯಲ್ಲಾಪುರ ವಿಭಾಗ ಮಟ್ಟದ ಡಿಆರ್‌ಎಫ್‌ಗಳು, ಗಸ್ತು ವನಪಾಲಕರು, ಅರಣ್ಯ ವೀಕ್ಷಕರು, ವಿವಿಧ ಶಾಲೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಇದ್ದರು. ಡಿಸಿಎಫ್ ಕಚೇರಿಯಿಂದ ಪ್ರಾರಂಭವಾದ ಕಾಲ್ನಡಿಗೆಯ ಜಾಥಾ ಪಟ್ಟಣದ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ಸಂಚರಿಸಿತು. ಜಾಥಾದಲ್ಲಿ ವೈಟಿಎಸ್‌ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು, ಕಲಕೇರಿಯ ದೊಳ್ಳು ಕುಣಿತ ಹಾಗೂ ಇಡಗುಂದಿ ಸಿದ್ದಿ ದಮಾಮಿ ಕುಣಿತ ಪ್ರಮುಖ ಆಕಷÀðಣೆಯಾಗಿದ್ದವು.