ಮು0ಡಗೋಡ: ಈರ್ವರ ನಡುವೆ ನಡೆದ ಜಗಳದಲ್ಲಿ ಗಾಯಗೊಂಡು ಮೃತಪಟ್ಟ ವ್ಯಕ್ತಿಯ ಮನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿ ಈರ್ವರ ನಡುವೆ ಸೆ.17ರಂದು ನಡೆದ ಜಗಳದಲ್ಲಿ ಮಂಜುನಾಥ ಭೋವಿ ಎನ್ನುವಾತ ಗಂಭೀರ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಅ.3ರ ಬೆಳಿಗ್ಗಿನ ಜಾವ ಮೃತಪಟ್ಟಿದ್ದ. ವಿಷಯ ತಿಳಿದು ಕುಟುಂಬದವರನ್ನ ಭೇಟಿಯಾದ ಎಸ್‌ಪಿ, ಯಾವುದೇ ತೊಂದರೆ ಕೊಟ್ಟರೆ 112ಗೆ ಕರೆ ಮಾಡಿ ಖಂಡಿತಾ ಸ್ಪಂದಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಭೋವಿ ಸಮಾಜದ ಪ್ರಮುಖರು, ಮಂಜುನಾಥನ ಮೇಲೆ ಹಲ್ಲೆ ಮಾಡಿದ್ದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಯಾವುದೇ ರೀತಿಯ ಸಾಕ್ಷಿ ನಾಶ ಮಾಡದೆ, ಯಾರ ಶಿಫಾರಸ್ಸಿಗೆ ಮಣಿಯಬಾರದು ಎಂದು ಪೊಲೀಸರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಗಣೇಶ ಕೆ.ಎಲ್., ಸಿಪಿಐ ಬಿ.ಎಸ್.ಲೋಕಾಪುರ ಹಾಗೂ ಸಿಬ್ಬಂದಿಗಳು ಇದ್ದರು. ಸಮಾಜದ ಮುಖಂಡರಾದ ಎಸ್‌ಸಿ, ಎಸ್‌ಟಿ ನಾಮನಿರ್ದೇಶನ ಸದಸ್ಯ ಶಿವಾನಂದ ದೇಸಳ್ಳಿ, ಎಸ್‌ಸಿ, ಎಸ್‌ಟಿ ದೌರ್ಜನ್ಯ ಸಮಿತಿಯ ಮಾಜಿ ಸದಸ್ಯ ಬಸವರಾಜ ಸಂಗಮೇಶ್ವರ, ಜಿಲ್ಲಾ ಸಮಾಜದ ಮಾಜಿ ಅಧ್ಯಕ್ಷ ಸುಭಾಷ್ ವಡ್ಡರ, ತಾಲೂಕಾ ಭೋವಿ ಸಮಾಜ ಮಾಜಿ ಅಧ್ಯಕ್ಷ ದುರ್ಗಪ್ಪ ಬಂಡಿವಡ್ಡರ, ಬಸವಂತಪ್ಪ ಕಟ್ಟಿಮನಿ, ನಾಗರಾಜ ಮೂಲಿಮನಿ ಹಾಗೂ ರಾಘು ಟಪಾಲದವರ ಒತ್ತಾಯಿಸಿದ್ದಾರೆ.