ಕಾರವಾರ: ಪ್ರತಿದಿನ ಬೆಳಿಗ್ಗೆ 5.30ಕ್ಕೆ ಕಾರವಾರದಿಂದ ಹೊರಡುವ ಕಾರವಾರ- ಮಣಿಪಾಲ ಬಸ್ ತಿಂಗಳಲ್ಲಿ ನಾಲ್ಕೈದು ಬಾರಿ ಕೆಟ್ಟು ಅಲ್ಲಲ್ಲಿ ನಿಲ್ಲುತ್ತಿರುವ ಬಗ್ಗೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಎನ್‌ಡಬ್ಲ್ಯುಕೆಆರ್‌ಟಿಸಿ ವಿಭಾಗೀಯ ನಿಯಂತ್ರಕರಿಗೆ ದೂರು ನೀಡಿದ್ದು, ಕೂಡಲೇ ವ್ಯವಸ್ಥೆ ಸರಿಪಡಿಸಲು ಆಗ್ರಹಿಸಿದ್ದಾರೆ.
ಕಾರವಾರದಿಂದ ಮಣಿಪಾಲಕ್ಕೆ ಹೊರಡುವ ಬಸ್‌ನಲ್ಲಿ ಹೆಚ್ಚಿನ ಭಾಗ ರೋಗಿಗಳೇ ತುಂಬಿರುತ್ತಾರೆ. ಮಣಿಪಾಲ, ಮಂಗಳೂರು ಆಸ್ಪತ್ರೆಗಳಿಗೆ ತೆರಳುವವರು ಮೆಮು ರೈಲನ್ನು ಹೊರತುಪಡಿಸಿದರೆ ಇದೇ ಬಸ್ ಅವಲಂಬಿಸಿದ್ದಾರೆ. ಆದರೆ ಈ ಬಸ್ ಇತ್ತೀಚಿಗೆ ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿರುವುದು ಗಮನಕ್ಕೆ ಬಂದಿದೆ. ಈ ವಾರದಲ್ಲೇ ಎರಡು ಬಾರಿ ಬ್ರೇಕ್‌ಡೌನ್ ಆಗಿ ಕುಮಟಾ, ಹೊನ್ನಾವರದಲ್ಲಿ ನಿಂತು ರೋಗಿಗಳಿಗೆ ಸಮಸ್ಯೆ ಉಂಟಾಗಿದೆ ಎಂದು ಮಾಧವ ನಾಯಕ ಎನ್‌ಡಬ್ಲ್ಯುಕೆಆರ್‌ಟಿಸಿ ಡಿಸಿಗೆ ಕರೆಮಾಡಿ ತಿಳಿಸಿದ್ದಾರೆ.
ಕಾರವಾರ- ಮಣಿಪಾಲಕ್ಕೆ ಹೊಸ ಬಸ್ ನೀಡಬೇಕು. ರೋಗಿಗಳೇ ಹೆಚ್ಚಾಗಿ ಈ ಬಸ್‌ನಲ್ಲಿ ಪ್ರಯಾಣಿಸುವುದರಿಂದ ಅವರಿಗಾಗಿ ಕನಿಷ್ಠ ಮಾನವೀಯ ದೃಷ್ಟಿಯಿಂದಲಾದರೂ ಉತ್ತಮ ಬಸ್‌ನ್ನು ಒದಗಿಸುವುದು ಸಾರಿಗೆ ಇಲಾಖೆಯ ಜವಾಬ್ದಾರಿ ಕೂಡ ಆಗಿರುತ್ತದೆ. ಹೀಗಾಗಿ ತಕ್ಷಣವೇ ಈ ಬಗ್ಗೆ ಕ್ರಮ ಕೂಡಲೇ ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ, ಬಸ್ ಬದಲಿಸಲು ಪ್ರಯತ್ನಿಸುವುದಾಗಿ ಡಿಸಿ ಪ್ರತಿಕ್ರಿಯಿಸಿರುವುದಾಗಿ ಮಾಧವ ನಾಯಕ ತಿಳಿಸಿದ್ದಾರೆ.