ಯಲ್ಲಾಪುರ: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ತಾಲೂಕಾ ಘಟಕದ ಆಶ್ರಯದಲ್ಲಿ ನೌಕರರ ಭವನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನವನ್ನ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಉಪನ್ಯಾಸಕಾರರಾಗಿ ಭಾಗವಹಿಸಿದ್ದ ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿಯವರು ಹಿರಿಯ ನಾಗರಿಕರು ಸುಲಭವಾಗಿ ಮಾಡಬಹುದಾದ ಲಘು ವ್ಯಾಯಾಮ, ಪ್ರಾಣಾಯಾಮ ಮತ್ತು ಧ್ಯಾನದ ಮಹತ್ವವನ್ನು ವಿವರಿಸಿದರು. ವೃತ್ತಿಯಿಂದ ನಿವೃತ್ತರಾದ ನಂತರ ಯೋಗ ಮಾಡಲು ಸಕಾಲ ಎಂದ ಅವರು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ಜೀವನದಲ್ಲಿ ಕೆಲವು ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರಲ್ಲದೆ ಆಸಕ್ತ ಹಿರಿಯ ನಾಗರಿಕರಿಗಾಗಿ ತಾವು ಯೋಗದ ಮಾರ್ಗದರ್ಶನ ನೀಡಲು ಸದಾ ಸಿದ್ಧ ಎಂದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖಾಧಿಕಾರಿ ವೆಂಕಟ ಸತ್ಯನಾರಾಯಣ, ಬ್ಯಾಂಕ್ ವತಿಯಿಂದ ಹಿರಿಯ ನಾಗರಿಕರಿಗಾಗಿ ರೂಪಿಸಲಾದ ಯೋಜನೆಗಳ ಮಾಹಿತಿ ನೀಡಿದರು. ಸಂಘದ ತಾಲೂಕಾಧ್ಯಕ್ಷ ಶ್ರೀರಂಗ ಕಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷೆ ಶೋಭಾ ಶೆಟ್ಟಿ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ 75 ವರ್ಷ ಮೀರಿದ ಸಂಘದ ಹಿರಿಯ ಸದಸ್ಯರಾದ ಕಸ್ತೂರಿ ಹೆಗಡೆ, ಸುಮಿತ್ರಾ ನಾಟೇಕರ ಮತ್ತು ರಮಾಬಾಯಿ ಪಾಟೀಲ್ ಅವರನ್ನು ಶಾಲು ಹೊದೆಸಿ, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಕಸ್ತೂರಿ ಹೆಗಡೆ ಹಿರಿಯ ನಾಗರಿಕಳಾಗಿ ಸನ್ಮಾನ ಸ್ವೀಕರಿಸಿದ್ದ ಸಂತಸ ಮತ್ತೆಲ್ಲೂ ಸಿಗುವದಿಲ್ಲ. ನನ್ನ ಸೇವಾ ಅವಧಿಯಲ್ಲೂ ಉತ್ತಮ ಕೆಲಸ ಮಾಡಿ ಜನರ ಆಶೀರ್ವಾದ ಪಡೆದು ಸಂತಸದ ದಿನ ಕಳೆದಿದ್ದೇನೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಶೋಭಾ ಎನ್.ಶೆಟ್ಟಿ, ಎಸ್.ಎಲ್.ಜಾಲಿಸತ್ಗಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸುರೇಶ ಬೋರಕರ, ಸ್ವಾಗತಿಸಿ ವರದಿ ವಾಚನ ಮಾಡಿದರು. ನಿವೃತ್ತ ಶಿಕ್ಷಕ ಜಿ ಕೆ ಭಟ್ಟ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ಸ್ವರ್ಗಸ್ಥರಾದ ಸಂಘದ ಹಿರಿಯ ಸದಸ್ಯ ಪದ್ಮಾಕರ ಫಾಯದೆ ಮಂಚಿಕೇರಿ ಅವರಿಗೆ ಮೌನ ಶೃದ್ಧಾಂಜಲಿ ಸಲ್ಲಿಸಲಾಯಿತು.