ಕಾರವಾರ: ಇಲ್ಲಿನ ನಗರ ಠಾಣೆಯಲ್ಲಿ ಸರಳ- ಸಜ್ಜನಿಕೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಇದೀಗ ಗದಗ ಜಿಲ್ಲೆಯ ರೋಣಕ್ಕೆ ವರ್ಗಾವಣೆಗೊಂಡ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದಪ್ಪ ಬೀಳಗಿ ಅವರಿಗೆ ನಗರಸಭೆ ಸದಸ್ಯರು ಸನ್ಮಾನಿಸಿ, ಬೀಳ್ಕೊಟ್ಟರು.
2021ರ ಜುಲೈನಲ್ಲಿ ಕಾರವಾರಕ್ಕೆ ನಿಯೋಜನೆಗೊಂಡಿದ್ದ ಅವರು, ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ, ಸಾರ್ವಜನಿಕರೊಂದಿಗೆ ಸ್ನೇಹಪರವಾಗಿ, ಸೌಹಾರ್ದಯುತವಾಗಿ ಜನಸ್ನೇಹಿಯಾಗಿದ್ದರು. ಸರಳ ನಡೆ- ನುಡಿ ಮೂಲಕ ಇಲಾಖೆಯಲ್ಲಿ ಉತ್ತಮ ಹೆಸರು ಸಂಪಾದಿಸಿಕೊಂಡಿದ್ದ ಅವರಿಗೆ ರೋಣಕ್ಕೆ ವರ್ಗಾವಣೆಯಾಗಿದ್ದು, ಹೀಗಾಗಿ ಶನಿವಾರ ನಗರಸಭೆಯ ಸದಸ್ಯರೆಲ್ಲ ಸನ್ಮಾನಿಸಿದರು.
ಬೀಳಗಿಯವರ ಸೇವೆ ನೆನೆದ ಸದಸ್ಯರುಗಳು, ಇನ್ನಷ್ಟು ಸಮಯ ಕಾರವಾರದಲ್ಲಿ ತಮ್ಮ ಸೇವೆ ಅಗತ್ಯವಿತ್ತು. ಆದರೆ ಸರ್ಕಾರದ ಆದೇಶಕ್ಕೆ ತಲೆಬಾಗಬೇಕಾಗಿದ್ದು, ಮುಂದೆ ಪದೋನ್ನತಿ ಹೊಂದಿ ಕಾರವಾರದಲ್ಲಿ ಮತ್ತೆ ಸೇವೆ ಸಲ್ಲಿಸುವ ಅಕಾಶ ಸಿಗಲಿ. ವೃತ್ತಿಯಲ್ಲಿ ಇನ್ನಷ್ಟು ಯಶಸ್ಸು ಸಿಗಲೆಂದು ಹಾರೈಸಿದರು.
ಈ ವೇಳೆ ನಗರಸಭೆಯ ಮಾಜಿ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಮಾಜಿ ಉಪಾಧ್ಯಕ್ಷ ಪ್ರಕಾಶ್ ಪಿ.ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ್ ಬಾಂದೇಕರ್, ಸದಸ್ಯರುಗಳಾದ ರೋಶ್ನಿ ಮಾಳ್ಸೇಕರ್, ಸಂಧ್ಯಾ ಬಾಡಕರ್, ರುಕ್ಮಿಣಿ ಗೌಡ, ಸ್ನೇಹ ಮಾಂಜ್ರೇಕರ, ನಂದಾ ಟಿ.ನಾಯ್ಕ, ಹನುಮಂತಪ್ಪ ತಳವಾರ, ಉಲ್ಲಾಸ್ ಕೇಣಿ, ಮಾಲಾ ಹುಲಸ್ವಾರ್ ಇದ್ದರು.