ಸಿದ್ದಾಪುರ: ಜಾನುವಾರುಗಳನ್ನು ಮಕ್ಕಳಂತೆ ಪೋಷಿಸಬೇಕು. ಇತ್ತೀಚೆಗೆ ಅವುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅವುಗಳನ್ನು ಹೆಚ್ಚು ಸಾಕುವುದರ ಮೂಲಕ ಸಗಣಿ ಗೊಬ್ಬರದಿಂದ ಬೆಳೆ ಬೆಳೆಯಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಕಿವಿಮಾತು ಹೇಳಿದರು.
ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪಶುಸಖಿ ಕಿಟ್ ವಿತರಣೆ ಹಾಗೂ ಪಶುಸಂಜೀವಿನಿ ಅಂಬುಲೆನ್ಸ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೃಷಿಯಲ್ಲಿ ಕೊಟ್ಟಿಗೆ ಗೊಬ್ಬರದ ಬದಲು ರಾಸಾಯನಿಕ ಬಳಕೆ ಹೆಚ್ಚುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದರು.
ಇಲಾಖೆಯ ಸಹಾಯಕ ನಿರ್ದೇಶಕ ವಿವೇಕಾನಂದ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಪಶುಸಂಜೀವಿನಿ ಅಂಬುಲೆನ್ಸ್ ಜಿಲ್ಲೆಯ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಕ್ಷೇತ್ರದ ಎರಡು ತಾಲೂಕಿನಲ್ಲಿ ಸೆ.1ರಿಂದ ಪ್ರಾರಂಭವಾಗಿದೆ ಎಂದ ಅವರು, ಪಶು ವೈದ್ಯಾಧಿಕಾರಿ ವಸತಿಗೃಹ ನಿರ್ಮಾಣ, ಆಸ್ಪತ್ರೆಯ ರಸ್ತೆ, ಸಿಬ್ಬಂದಿ ಕೊರತೆ ಹಾಗೂ ಇತರ ಸಮಸ್ಯೆಗಳ ಮನವಿ ನೀಡಿದರು.
ಈ ವೇಳೆ ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ ನಾಯ್ಕ, ಮಾಜಿ ಉಪಾಧ್ಯಕ್ಷ ರವಿಕುಮಾರ ನಾಯ್ಕ, ತಾಲೂಕಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆಯ್.ನಾಯ್ಕ, ಸಂಜೀವಿನಿ ಒಕ್ಕೂಟದ ತಾಲೂಕಾ ಅಧ್ಯಕ್ಷೆ ಭಾರತಿ ಭಟ್ ಉಪಸ್ಥಿತರಿದ್ದರು. ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ವಿವೇಕಾನಂದ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.