ಹೊನ್ನಾವರ: ತಾಲೂಕಿನ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವ ಎಂದು ಪ್ರಸಿದ್ದತೆ ಪಡೆದಿರುವ ಹೊನ್ನಾವರ ಪಟ್ಟಣದ ಟಪ್ಪರ್ ಹಾಲ್‌ನಲ್ಲಿನ ವಿಶ್ವಹಿಂದೂ ಪರಿಷತ್ ಗಣೇಶೋತ್ಸವ ಈ ವರ್ಷ 55ನೇ ವರ್ಷ ಆಚರಿಸಿಕೊಂಡಿದ್ದು, 9 ದಿನಗಳ ಪರ್ಯಂತ ವಿಜ್ರಂಭಣೆಯಿಂದ ನಡೆದ ಗಣೇಶೋತ್ಸವಕ್ಕೆ ಅದ್ದೂರಿಯಾಗಿ ಮೆರವಣೆಗೆ ನಡೆಸಿ ಮೂರ್ತಿಸುವ ವಿಸರ್ಜಿಸುವ ಮೂಲಕ ತೆರೆ ಎಳೆಯಲಾಯಿತು.
ತಾಲೂಕಿನಲ್ಲೆ ಅತ್ಯಂತ ಅದ್ಧೂರಿ ಮೆರವಣಿಗೆ ಎಂದು ಕರೆಸಿಕೊಳ್ಳುವ ರೀತಿಯಲ್ಲಿ ಭವ್ಯ ಶೋಭಾಯಾತ್ರೆಯಲ್ಲಿ ಸರಿಸುಮಾರು 3ರಿಂದ 4 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಪಟ್ಟಣದ ಬೀದಿಗಳಲ್ಲಿ ಮೆರವಣೆಗೆ ಸಾಗುವಾಗ ಕೇಸರಿಯ ಸಮವಸ್ತ್ರ ತೊಟ್ಟ ಸಾವಿರಾರು ಹಿಂದೂ ಕಾರ್ಯಕರ್ತರು ಗಣಪತಿ ಬಪ್ಪಾ ಮೋರಯಾ ಎಂದು ಘೋಷಣೆಯ ಜೋತೆ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಪಟ್ಟಣದ ಬೀದಿಗಳಲ್ಲಿ ಸಾಗುವಾಗ ಅಪಾರ ಪ್ರಮಾಣದಲ್ಲಿ ಮಹಿಳೆಯರೂ ಪಾಲ್ಗೊಂಡು ಅವರೊಂದಿಗೆ ಹೆಜ್ಜೆಹಾಕಿರುವುದು ಇನ್ನೊಂದು ವಿಶೇಷವಾಗಿತ್ತು. ಯುವಕರಂತೂ ಭಗವಾದ್ವಜವನ್ನು ತಿರುಗಿಸುತ್ತಾ ಜೈ ಶ್ರೀರಾಮ ಘೋಷಣೆಯೊಂದಿಗೆ ಕುಣಿದು ಕುಪ್ಪಳಿಸಿದರು.
ಶರಾವತಿ ವೃತ್ತದಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ 4 ಗಂಟೆಗೂ ಅಧಿಕ ಕಾಲ ಸಾಗಿ ಶರಾವತಿ ನದಿಯಲ್ಲಿ ಮಂಗಲಮೂರ್ತಿಯನ್ನು ವಿಸರ್ಜಿಸಲಾಯಿತು. ಹೆದ್ದಾರಿಯಲ್ಲಿ ಸಾಗುವಾಗ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಳಿಸಿದರು. ಎಸ್ಪಿ, ಡಿವೈಎಸ್ಪಿ ನೂರಾರು ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳು ಶಾಂತಿ ಸುವ್ಯವಸ್ತೆಗಾಗಿ ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಂಡರು.