ಹಳಿಯಾಳ: ಬಹು ರಾಷ್ಟ್ರೀಯ ಕಂಪನಿಗಳು ವಿದ್ಯಾರ್ಥಿಗಳಿಂದ ಬಯಸುತ್ತಿರುವ ಕೌಶಲ್ಯದ ಕುರಿತು ಅರಿವು ಮೂಡಿಸುವ ಉಪನ್ಯಾಸ ಕಾರ್ಯಕ್ರಮ ಕೆಎಲ್‌ಎಸ್ ವಿಡಿಐಟಿಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಕಾಗ್ನಿಜೆಂಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈಷ್ಣವಿ ಜೋಶಿ, ವಿಪ್ರೋ ಡಾಟಾ ಎನಾಲಿಸ್ಟ್ ಸುನೀತಾ ಎನ್.ಕೆ. ಮತ್ತು ಬೆಂಜ್ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ತೇಜಸ್ವಿನಿ ದಿಗೆವಾಡಿ ಆಗಮಿಸಿದ್ದರು.
ಬಹುರಾಷ್ಟ್ರೀಯ ಕಂಪನಿಗಳು ಸಂದರ್ಶನಗಳಲ್ಲಿ ವಿದ್ಯಾರ್ಥಿಗಳಿಂದ ಬಯಸುತ್ತಿರುವ ಸಂವಹನ ಹಾಗೂ ಇತರೆ ಕೌಶಲ್ಯಗಳ ಕುರಿತಾಗಿ ವೈಷ್ಣವಿ ಮಾಹಿತಿ ನೀಡಿದರು. ಸಾಫ್ಟ್ವೇರ್ ಕಂಪನಿಗಳಲ್ಲಿ ಇಂಜಿನಿಯರ್‌ಗಳಿಗೆ ಇರುವ ಅವಕಾಶಗಳ ಕುರಿತಾಗಿ ಸುನಿತಾ ಸಮಗ್ರ ಮಾಹಿತಿ ನೀಡಿದರು. ಪ್ರಸ್ತುತ ಕೈಗಾರಿಕಾ ಕ್ಷೇತ್ರವು ವಿದ್ಯಾರ್ಥಿಗಳು ಕಲಿಯಲೇ ಬೇಕೆಂದು ಬಯಸುತ್ತಿರುವ ನೂತನ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಹಾಗೂ ಆಟೋಮಿಷನ್ ಗಳ ಕುರಿತಾಗಿ ತೇಜಸ್ವಿನಿ ವಿವರಿಸಿದರು.
ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದ ಕಾರ್ಯನಿರ್ವಹಣೆ ಮತ್ತು ಅಗತ್ಯತೆಯ ಕುರಿತು ತಿಳಿದುಕೊಳ್ಳಲು ಇಂತಹ ಉಪನ್ಯಾಸ ಕಾರ್ಯಕ್ರಮವು ಸಹಕಾರಿಯಾಗುವುದು ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ ಹೇಳಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರಾದ ಡಾ.ಮಹೇಂದ್ರ ದೀಕ್ಷಿತ್ ಕಾರ್ಯಕ್ರಮ ಸಂಯೋಜಿಸಿದ್ದರು. ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ವಿಭಾಗದ ಸಂಚಾಲಕ ಪ್ರೊ.ರಜತ್ ಆಚಾರ್ಯ, ಪ್ರೊ.ನವೀನ್ ಹಿರೇಮಠ್, ಡಾ.ವಿನೋದ್ ನಾಯ್ಕ ಉಪಸ್ಥಿತರಿದ್ದರು.